ಬೆಂಗಳೂರು:- ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ನಲ್ಲಿ ತಿರಸ್ಕೃತಗೊಂಡಿದ್ದು, ಸರ್ಕಾರ ಮುಜುಗುರಕ್ಕೆ ಒಳಗಾಗಿದೆ. ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿರುದ್ಧ 26 ಮತಗಳು ಬಂದವು, ಪರ 23 ಮತಗಳು ಬಂದವು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಧಾನಪರಿಷತ್ನಲ್ಲಿ ತಿರಸ್ಕೃತಗೊಂಡಿದೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಚಾರವಾಗಿ ಸುದೀರ್ಘ, ಚರ್ಚೆಯಾಗಿ ಅಂಗೀಕಾರಗೊಂಡಿತ್ತು.
ಬುಧವಾರ (ಆ.20) ಕಾನೂನು ಸಚಿವ ಹೆಚ್ಕೆ ಪಾಟೀಲ್ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ನಲ್ಲಿ ಮಂಡಿಸಿದರು. ಆಗ, ವಿಪಕ್ಷಗಳು ವಿಧೇಯಕವನ್ನು ಮತಕ್ಕೆ ಹಾಕುವಂತೆ ಮನವಿ ಮಾಡಿದವು. ಬಳಿಕ, ಸಭಾಪತಿ ಬಸವರಾಜ ಹೊರಟ್ಟಿಯವರು ವಿಧೇಯಕವನ್ನು ಮತಕ್ಕೆ ಹಾಕಲು ಮುಂದಾದರು.
ಮತಕ್ಕೆ ಹಾಕುವ ಮೊದಲು ಎದ್ದು ನಿಂತ ಹೆಚ್.ಕೆ ಪಾಟೀಲ್, ಇದು ವಿರೋಧ ಪಕ್ಷಗಳ ಘನತೆಗೆ ಇದು ತಕ್ಕದ್ದಲ್ಲ. ಇದೊಂದು ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ. ನಾನು ಎಲ್ಲ ಉತ್ತರ ಕೊಟ್ಟಮೇಲೂ, ಮತ ಹಾಕುವುದು ಅನವಶ್ಯಕವಾಗಿದೆ. ರಾಜಕಾರಣ ತರುವಂಥದ್ದು ಸರಿಯಲ್ಲ ಎಂದು ಹೇಳಿದರು.
ನಂತರ, ಸಭಾಪತಿ ಬಸವರಾಜ್ ಹೊರಟ್ಟಿಯವರು ಮತಕ್ಕೆ ಹಾಕಬೇಕಾ? ಬೇಡವಾ? ಎಂದು ಮತ್ತೊಮ್ಮೆ ಕೇಳಿದರು. ವಿಪಕ್ಷಗಳು ಮತಕ್ಕೆ ಹಾಕುವಂತೆ ಹೇಳಿದ ಮೇಲೆ, ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದರು. ಆಗ, ವಿಧೇಯಕದ ಪರವಾಗಿ 23 ಮತಗಳು ಮತ್ತು ವಿರುದ್ಧವಾಗಿ 26 ಮತಗಳು
ಬಂದವು. ಈ ಕಾರಣದಿಂದ ವಿಧೇಯಕ ತಿರಸ್ಕೃತಗೊಂಡಿತು.
ಕಾಂಗ್ರೆಸ್ನ ಯು.ಬಿ.ವೆಂಕಟೇಶ್, ಪ್ರಕಾಶ್ ರಾಥೋಡ್ ಅವರ ಸದಸ್ಯತ್ವ ಅವಧಿ ಮುಕ್ತಾಯಗೊಂಡಿದೆ. ಇನ್ನು, ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಕಾರಣದಿಂದ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಬಲ ಕಡಿಮೆಯಾಗಿದೆ.
Leave feedback about this