ಬೆಂಗಳೂರು:- ದಸರಾ ಉದ್ಘಾಟನೆಗೆ ಸರಕಾರ ನೀಡಿರುವ ಆಹ್ವಾನವನ್ನು ಬಾನು ಮುಷ್ತಾಕ್ ತಿರಸ್ಕರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ರಾಜ್ಯ ಸರಕಾರ ಬಾನು ಮುಷ್ತಾಕ್ಗೆ ಆಹ್ವಾನ ನೀಡಿದ್ದು, ಅವರು ಒಪ್ಪಿಕೊಂಡಿದ್ದಾರೆ. ಆದರೆ, ರಾಜ್ಯದ ಹಿಂದೂಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಹಬ್ಬ. ಅದನ್ನು ನಮ್ಮ ಹಿಂದೂಗಳೇ ಮಾಡಬೇಕು. ಬೇರೆ ಧರ್ಮದವರು ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಆದ್ದರಿಂದ ಮುಷ್ತಾಕ್ ದಸರಾ ಉದ್ಘಾಟನೆಯ ಆಹ್ವಾನವನ್ನು ಒಪ್ಪಿಕೊಳ್ಳಬಾರದು ಎಂದು ಮನವಿ ಮಾಡಿದರು.
ನಾನು ಪೊಲೀಸ್ ಸೇವೆಯಲ್ಲಿದ್ದಾಗ ಸುಮಾರು 10 ವರ್ಷಗಳ ಕಾಲ ದಸರಾ ಸಂದರ್ಭದಲ್ಲಿ ಚಾಮುಂಡಿ ದೇವಸ್ಥಾನದಲ್ಲಿ, ಮೈಸೂರು ಅರಮನೆ, ವಿಜಯದಶಮಿ, ಆಯುಧ ಪೂಜೆ ಭದ್ರತೆಗೆ ಕೆಲಸ ಮಾಡಿದ್ದೇನೆ. ಇದರಿಂದ ಆ ಹಬ್ಬಕ್ಕಿರುವ ಮಹತ್ವ, ಅದು ಹಿಂದೂಗಳಿಗೆ ಎಷ್ಟು ಪ್ರಮುಖವಾಗಿದೆ ಎಂಬುದು ಅರ್ಥವಾಗಿದೆ ಎಂದರು.
ಇದು ಹಿಂದೂಗಳ ಧಾರ್ಮಿಕ ಹಬ್ಬ. ಅದಕ್ಕೆ ಮುಸಲ್ಮಾನರು ಹೋದರೆ ಅವರ ಭಾವನೆಗಳಿಗೆ ಧಾರ್ಮಿಕ ಧಕ್ಕೆ ಉಂಟಾಗುತ್ತದೆ. ಇದರಿಂದ ವಿವಾದಗಳು ಸೃಷ್ಟಿಯಾಗುತ್ತದೆ ಹಾಗೂ ಹಿಂದೂ ಮುಸಲ್ಮಾನರ ಮಧ್ಯೆ ದ್ವೇಷ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಬಾನು ಮುಷ್ತಾಕ್ ಮೇಲೆ ಪ್ರೀತಿ, ಗೌರವವಿದ್ದರೆ ಸರಕಾರವು ದಸರಾ ಕಾರ್ಯಕ್ರಮದಲ್ಲಿ ಅವರಿಗೆ ಗೌರವ ಸಮರ್ಪಿಸಲಿ. ಆದರೆ, ದಸರಾ ಉದ್ಘಾಟನೆ ಮಾಡಿಸುವುದು ಸರಿಯಲ್ಲ ಎಂದರು.
Leave feedback about this