ಬೆಂಗಳೂರು

ಶಾಸಕರ ವಿದೇಶಿ ಪ್ರವಾಸ ಕೈಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ತಲ್ಲಣ

ಬೆಂಗಳೂರು ಡೆಸ್ಕ್:- ತೀವ್ರ ವಿರೋಧ ಹಾಗೂ ಅಧಿಕಾರ ಹಂಚಿಕೆಯ ಗೊಂದಲದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ 20ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸ ಕೈಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ. ಆಡಳಿತ ಪಕ್ಷದಲ್ಲಿ ನಡೆಯುತ್ತಿರುವ ವಿದೇಶಿ ಪ್ರವಾಸ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಣ ನಡೆಸಿದ್ದ ದೆಹಲಿ ಯಾತ್ರೆಗೆ ಎದಿರೇಟು ಎಂಬಂತೆ ಬಿಂಬಿಸಲಾಗಿದೆ. ಆರಂಭದಲ್ಲಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ 35ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸಕ್ಕೆ ಹೊರಟ್ಟಿದ್ದರು. ಆದರೆ, ಕೊನೆ ಕ್ಷಣದಲ್ಲಿ ರಾಜಕೀಯ ತೊಂದರೆಗೆ ಒಳಗಾಗಬಾರದು ಎಂಬ ಕಾರಣಕ್ಕೆ ಹಿಂದೆ ಸರಿದಿದ್ದಾರೆ. ಹೈಕಮಾಂಡ್‌ ಶಾಸಕರ ವಿದೇಶಿ ಪ್ರವಾಸ ಕುರಿತು ಮಾಹಿತಿ ಕೇಳಿತ್ತು. ಅದರ ಬೆನ್ನಲ್ಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿದೇಶಿ ಪ್ರವಾಸ ಕುರಿತು ತಮಗೆ ಮಾಹಿತಿ ಇಲ್ಲ ಎಂದಿದ್ದರು.

ಕೆಲವರು ಅಂಜಿಕೆಯಿಂದಲೇ ಹಿಂದೆ ಸರಿದಿದ್ದಾರೆ. ಬಹುತೇಕ ಶಾಸಕರು ಕುಟುಂಬ ಸಹಿತರಾಗಿ ವಿದೇಶಿ ಪ್ರವಾಸ ತೆರಳುತ್ತಿದ್ದು, ಮಾರ್ಚ್‌ 1ರ ನಂತರ ಸ್ವದೇಶಕ್ಕೆ ವಾಪಾಸ್‌‍ ಬರಲಿದ್ದಾರೆ. ಈ ಪ್ರವಾಸಕ್ಕೆ ಪ್ರಾಯೋಜಕತ್ವ ಯಾರದು? ಎಂಬ ಪ್ರಶ್ನೆ ತೀವ್ರ ಕುತೂಹಲ ಕೆರಳಿಸಿದೆ.

ಕೆಲ ಶಾಸಕರು ತಮ ಸ್ವಂತ ಖರ್ಚಿನಲ್ಲಿ ಪ್ರವಾಸ ಕೈಗೊಂಡರೆ ತಪ್ಪೇನು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಒಂದಿಬ್ಬರು ಸ್ವಂತ ಖರ್ಚಿನಲ್ಲಿ ಪ್ರವಾಸ ತೆರಳಿದ್ದರೆ ಅದರಲ್ಲಿ ವಿಶೇಷ ಏನು ಇರುತ್ತಿರಲಿಲ್ಲ. ಆದರೆ, ಏಕಕಾಲಕ್ಕೆ 30ಕ್ಕೂ ಹೆಚ್ಚು ಶಾಸಕರು ಒಂದೇ ದೇಶಕ್ಕೆ ಪ್ರವಾಸಕ್ಕೆ ಅಣಿಯಾಗಿದ್ದಂತೂ ಕಾಕತಾಳೀಯವಲ್ಲ.

ಪ್ರವಾಸ ತೀವ್ರ ವಿವಾದ ಸೃಷ್ಟಿಯಾದ ನಂತರ ಸಚಿವ ಕೆ.ವೆಂಕಟೇಶ್‌, ಶಾಸಕರಾದ ರಾಘವೇಂದ್ರ ಹಿಟ್ನಾಳ್‌, ಕೋನರೆಡ್ಡಿ, ಶಾಂತನಗೌಡ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಉಳಿದಂತೆ ರಾಯಚೂರು ಗ್ರಾಮೀಣ ಬಸನಗೌಡ ದದ್ದಲ್‌, ಮಸ್ಕಿ ಬಸನಗೌಡ ತುರವಿಹಾಳ, ಕಲಬುರಗಿ, ದಕ್ಷಿಣ ಅಲ್ಲಮಪ್ರಭು ಪಾಟೀಲ್‌, ಕೊಳ್ಳೆಗಾಲ ಎ ಆರ್‌ ಕೃಷ್ಣಮೂರ್ತಿ, ಚಾಮರಾಜನಗರ ಪುಟ್ಟರಂಗಶೆಟ್ಟಿ, ಚಿಕ್ಕಮಗಳೂರು ಕ್ಷೇತ್ರದ ಎಚ್‌.ಡಿ.ತಮಯ್ಯ, ಸಿಂಧನೂರು ಹಂಪನಗೌಡ ಬಾದರ್ಲಿ, ಜಗಳೂರು ದೇವೇಂದ್ರಪ್ಪ, ಹೆಚ್‌.ಡಿ.ಕೋಟೆ ಅನಿಲ್‌ಚಿಕ್ಕಮಾಧು, ಸಿರಗುಪ್ಪ ಕ್ಷೇತ್ರದ ಬಿ.ಎಂ.ನಾಗರಾಜ್‌, ಬಾದಮಿ ಬಿ.ಬಿ.ಚಿಮನಕಟ್ಟಿ, ಬೈಲಹೊಂಗಲ ಮಹಂತೇಶ್‌ ಕೌಜಲಗಿ, ಚಳ್ಳಕೆರೆ ರಘುಮೂರ್ತಿ, ಬೀಳಗಿ ಕ್ಷೇತ್ರದ ಜಿ.ಟಿ.ಪಾಟೀಲ್‌ ಹಂತ ಹಂತವಾಗಿ ವಿದೇಶಕ್ಕೆ ತೆೆರಳಿದ್ದಾರೆ. ವಿಧಾನಸಭೆಯ ಶಾಸಕರ ಜೊತೆಗೆ ವಿಧಾನ ಪರಿಷತ್‌ ಸದಸ್ಯರಾದ ನಾಗರಾಜ್‌ ಯಾದವ್‌, ವಸಂತಕುಮಾರ, ತಿಮಯ್ಯ ಮತ್ತಿತರರು ತೆರಳಿದ್ದಾರೆ.

ಈ ಬಾರಿ ಹಿರಿಯ ನಾಯಕರ ಮಾತಿಗೆ ಸೊಪ್ಪು ಹಾಕದೆ ಶಾಸಕರು ವಿದೇಶಕ್ಕೆ ಹಾರಿದ್ದಾರೆ. ನಾವು ನಮ ಸ್ವಂತ ಖರ್ಚಿನಲ್ಲಿ ವಿದೇಶಿ ಪ್ರವಾಸ ಕೈಗೊಳ್ಳುವುದಾದರೆ ಪಕ್ಷದ ವರಿಷ್ಠ ನಾಯಕರಿಗೆ ಏಕೆ ಅನುಮತಿ ಕೇಳಬೇಕು ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯ ಆಪ್ತರು ಮುಂದಿಟ್ಟಿದ್ದಾರೆ. ಪಕ್ಷವನ್ನು ಲೆಕ್ಕಿಸದೆ ಸಿದ್ದರಾಮಯ್ಯ ಬಣದ ಶಾಸಕರು ವಿದೇಶಕ್ಕೆ ತೆರಳಿರುವುದನ್ನು ನೋಡಿದಾಗ ಮುಂದೆ ರಾಜ್ಯ ರಾಜಕೀಯದಲ್ಲಿನ ಸುನಾಮಿಯ ಮುನ್ಸೂಚನೆ ನೀಡಿದೆ.

ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವ ಶಾಸಕರು ಕೂಡ ವೈಯಕ್ತಿಕ ಪ್ರವಾಸ ಎಂದು ನೆಪ ಹೇಳುತ್ತಿದ್ದರಾದರೂ ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಗೊತ್ತಿಲ್ಲ. ಶಾಸಕರ ವಿದೇಶಿ ಪ್ರವಾಸ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅಸಹನೆಗೆ ಕಾರಣವಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video