ತುಮಕೂರು

ಯಾವುದೇ ಹಿಂದೂ ದೇವಸ್ಥಾನ ಇದ್ದರೂ 25 ಅಡಿ ಮಾರ್ಕ್ ಮಾಡಿ ಸೈಲೆಂಟ್ ಜೋನ್ ಘೋಷಣೆ ಮಾಡಬೇಕು.- ರಾಜಣ್ಣ

ತುಮಕೂರು:- ಅನ್ಯಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್‌ಸಿ ಸರ್ಟಿಫಿಕೇಟ್ ವಜಾ ವಿಚಾರವಾಗಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಪರಿಶಿಷ್ಟ ಜಾತಿಯ ಹುಡುಗ ಸವರ್ಣಿಯರ ಮನೆಗೆ ಹೋಗಲು ಸಾಧ್ಯವೇ?, ಸವರ್ಣೀಯರು ನಡುಮನೆಗೆ ಅವನನ್ನು ಬಿಟ್ಟುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿರುವ ಕೆ.ಎನ್‌.ರಾಜಣ್ಣ, ಅದೇ ಅವನು ಒಂದು ಶಿಲುಬೆ ಕಂಟ್ಕೊಂಡು ಹೋದರೆ ನಡುಮನೆಗೆ ಕರೆದು ಕೂರಿಸುತ್ತಾರೆ. ಆಗ ಸಮಾನತೆ ಬಂತು ಅಂತಾ ಆ ಹುಡುಗನಲ್ಲಿ ಭಾವನೆ ಬರುತ್ತದೆ ಎಂದಿದ್ದಾರೆ.

ರಾಜ್ಯಾದ್ಯಂತ ಜಾತಿಗಣತಿ ಸಮೀಕ್ಷೆ ನಡೆಯುತ್ತಿರುವ ವೇಳೆ ಮತಾಂತರಗೊಂಡವರೂ ಸಹ ದಲಿತರ ಪರ ಯೋಜನೆಗಳ ಫಲಾನುಭವಿಗಳಾಗುತ್ತಿರುವುದು ಹಲವರ ಅಸಮಧಾನಕ್ಕೆ ಕಾರಣವಾಗಿದೆ.

ಮತಾಂತರದ ಬಗ್ಗೆ ನಾನು ಸರಿ ತಪ್ಪು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದಿರುವ ಕೆ.ಎನ್‌. ರಾಜಣ್ಣ, ನಮ್ಮಲ್ಲಿ ದಲಿತ ಸಮುದಾಯದವರು ಕ್ರಿಶ್ಚಿಯಾನಿಟಿ ಗೆ ಬದಲಾವಣೆ ಆಗೋದನ್ನ ನಾನು ನೋಡ್ತಾ ಇದ್ದೇನೆ. ಅದಕ್ಕೆ ಯಾರದ್ದೂ ಒತ್ತಾಯವಿಲ್ಲ. ಒಬ್ಬರನ್ನು ನೋಡಿ ಒಬ್ಬರು ಮತಾಂತರವಾಗುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ. ನಾನು ಹಲವರ ಬಳಿ ಯಾಕೆ ನೀವೆಲ್ಲ ಹೀಗೆ ಮಾಡ್ತಾ ಇದ್ದೀರಾ ಇದು ಸರಿಯೇ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ಸರ್ ಅವರ ಮನೆಗೆ ಹೋಗೋಣ ನಮ್ಮನ್ನು ಒಳಗೆ ಕರೆಯುತ್ತಾರೆಯೇ ನೋಡೋಣ. ಅದೇ ಶಿಲುಬೆ ಕಟ್ಟಿಕೊಂಡರೆ ಒಳ ಕರೀತಾರೆ ಸ್ವಾಮಿ ಅದಕ್ಕೆ ಸೇರಿದಿನಿ ಎಂಬ ಉತ್ತರ ಬಂತು. ಇದಕ್ಕೆ ನನ್ನ ಬಳಿ ಪ್ರತಿಕ್ರಿಯೆ ಇರಲಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಅವರ ಅನುಕೂಲಕ್ಕೆ ತಕ್ಕಂತೆ ತೀರ್ಮಾನ ಮಾಡಿಕೊಳ್ಳುವುದಕ್ಕೆ ಮತಾಂತರ ಆಗುತ್ತಿರಬಹುದು. ಅಂಬೇಡ್ಕರ್ ರವರೂ ಸಹ ನಾನು ಹಿಂದೂ ಆಗಿ ಹುಟ್ಟಿದ್ದೇನೆ ಹಿಂದೂ ಆಗಿ ಸಾಯಲಾರೆ ಎಂದು ಹೇಳಿದ್ದರು.ಹಿಂದುತ್ವದ ವಿರುದ್ಧವಾಗಿ ನಿಂತು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಇವತ್ತು ಅಂಬೇಡ್ಕರ್ ಅನುಯಾಯಿಗಳೇ ನಾಮ ಬಳಿದುಕೊಂಡು ಟೇಪ್ ಕಟ್ಕೊಂಡು ಹಿಂದುತ್ವ ಎಂದು ಭಾಷಣ ಮಾಡುತ್ತಾರೆ. ಹೀಗೆ ಮಾಡುವುದು ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅವಮಾನ ಎಂದು ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ಹಿಂದೂ ಧರ್ಮದಲ್ಲಿನ ತಾರತಮ್ಯಗಳನ್ನ ನಿವಾರಣೆ ಮಾಡಲಿಕ್ಕೆ ಅಂಬೇಡ್ಕರ್ ಅವರು ವಿಫಲವಾದ್ದರಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಇತಿಹಾಸಗಳನ್ನು ತಿಳಿದುಕೊಂಡು ನಾವು ಮಾತನಾಡಬೇಕೇ ಹೊರತು ಸುಮ್ಮನೆ ಎಮೋಷನಲ್ ಆಗಿ ಹಿಂದುತ್ವ, ಹಿಂದೂ ಅನ್ನೋದು ಸರಿಯಲ್ಲ ಎಂದು ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ಈಗೆಲ್ಲಾ ಹಿಂದೂ ಗಣೇಶ ಎಂಬುದು ಟ್ರೆಂಡ್‌ ಆಗುತ್ತಿದೆ. ಇವೆಲ್ಲಾ ಯಾವ ಶಾಸ್ತ್ರದಲ್ಲಿದೆ. ಮುಸ್ಲಿಂ ಗಣೇಶ ಕ್ರಿಶ್ಚಿಯನ್‌ ಗಣೇಶ ಎಂದು ಬೇರೆ ಇದ್ದಾನೆಯೇ ಎಂದು ಪ್ರಶ್ನಿಸಿದ ಕೆ.ಎನ್‌. ರಾಜಣ್ಣ, ಗಣೇಶ ಯಾವತ್ತೂ ಹಿಂದೂನೇ. ಆದರೆ ಹಿಂದುತ್ವದ ಹೆಸರಿನಲ್ಲಿ ಒಡಕು ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಗಣೇಶನ ಉತ್ಸವದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಯಾವುದೇ ಹಿಂದೂ ದೇವಸ್ಥಾನ ಇದ್ದರೂ ಅದರ ಸುತ್ತ 25 ಅಡಿ ಮಾರ್ಕ್ ಮಾಡಿ ಸೈಲೆಂಟ್ ಜೋನ್ ಅಂತ ಸರ್ಕಾರದಿಂದ ಘೋಷಣೆ ಮಾಡಬೇಕು. ಅಲ್ಲಿ ಯಾರೂ ತಮಟೆಯನ್ನೂ ಬಡಿಯಬಾರದು. ಡಿಜೆನೂ ಹಾಕಬಾರದು ಹಾಗೂ ಘೋಷಣೆಗಳನ್ನು ಕೂಗಬಾರದು. ಇದರಿಂದ ಎಷ್ಟೋ ಅನಾಹುತಗಳು ತಪ್ಪುತ್ತವೆ ಎಂದು ಕೆ.ಎನ್‌.ರಾಜಣ್ಣ ಸಲಹೆ ನೀಡಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video