ಬೆಂಗಳೂರು:- ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 (ಜಾತಿಗಣತಿ)ಯಲ್ಲಿ ತಪ್ಪದೇ ಪ್ರತಿಯೊಬ್ಬರು ಭಾಗವಹಿಸಿ, ಅನುಸೂಚಿಯ ಧರ್ಮದ ಕಾಲಂನಲ್ಲಿ “ಇತರೇ” ಎಂದು ನೀಡಿರುವ ಕಾಲಂನಲ್ಲಿ “ವೀರಶೈವ ಲಿಂಗಾಯತ” ಎಂದು, ಹಾಗೆಯೇ ಜಾತಿಯ ಕಾಲಂನಲ್ಲಿ “ಲಿಂಗಾಯತ” ಅಥವಾ “ವೀರಶೈವ” ಅಥವಾ “ವೀರಶೈವ ಲಿಂಗಾಯತ” ಎಂದು ಮತ್ತು ಉಪಜಾತಿ ಕಾಲಂನಲ್ಲಿ ತಾವು ಸೇರಿದ ಉಪಜಾತಿಯ ಸಂಕೇತ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಬರೆಸಬೇಕು.
ಜೊತೆಗೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ಪಷ್ಟವಾಗಿ ಗಣತಿದಾರರಿಗೆ ನೀಡಿ, ತಾವು ನೀಡಿದ ಮಾಹಿತಿಯನ್ನು ಸರಿಯಾಗಿ ದಾಖಲಿಸಿಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಒಪ್ಪಿಗೆ ನೀಡುವುದು. ಆಯೋಗವು ಕೈಪಿಡಿಯನ್ನು ಬಿಡುಗಡೆ ಮಾಡಿದ ನಂತರ ಅಧಿಕೃತ ಮಾಹಿತಿಯನ್ನು ತಮ್ಮಗಳ ಗಮನಕ್ಕೆ ತರಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ, ಸಚಿವರು ಮನವಿ ಮಾಡಿದರು.
ಅವರು ಇಂದು ಸದಾಶಿವ ನಗರದ ಸಭಾದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಮಾತು ಮುಂದುವರಿದ ಅವರು, ಸರ್ಕಾರಕ್ಕೆ ನಾಡಿನ ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಮಾಹಿತಿ ದೊರೆತರೆ, ನಾಡಿನ ಜನರೆಲ್ಲರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಲು ಅನುವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮೀಸಲಾತಿಗಾಗಿ ನೀಡುವ ಜಾತಿ ಪ್ರಮಾಣ ಪತ್ರಕ್ಕೂ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬರೆಸುವ ಮಾಹಿತಿಗೂ ಸಂಬಂಧವಿರುವುದಿಲ್ಲ. ನೈಜ ಜಾತಿಯನ್ನು ಶಾಲಾ ದಾಖಲಾತಿ ಇನ್ನಿತರೇ ದಾಖಲಾತಿಗಳನ್ನು ಪರಾಮರ್ಶಿಸಿದ ಬಳಿಕವಷ್ಟೇ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ನೈಜ ಜಾತಿಯನ್ನೇ ಸಮೀಕ್ಷೆಯಲ್ಲಿ ಬರೆಸಬೇಕು, ನಮ್ಮ ಸಮುದಾಯದ ನೈಜ ಸಂಖ್ಯೆ ಹೊರಹೊಮ್ಮಲು ಸಹಕರಿಸಬೇಕು ಎಂದು ಸಮಸ್ತ ವೀರಶೈವ ಲಿಂಗಾಯತ ಸಮಾಜದ ಬಾಂಧವರಿಗೆ ಮಹಾಸಭಾದ ಪರವಾಗಿ ಮನವಿ ಮಾಡಿದರು.
ಎಲ್ಲ ಜಾತಿ, ಸಮುದಾಯಕ್ಕೂ ನ್ಯಾಯ ದೊರಕುವ ರೀತಿಯಲ್ಲಿ ಸಮೀಕ್ಷೆಯನ್ನು ನಡೆಸುವಂತೆ ಮಹಾಸಭಾ ಸರ್ಕಾರಕ್ಕೆ ಮನವಿ ಮಾಡಿದೆ. ಅದೇ ರೀತಿ ಎಲ್ಲ ಪರಮಪೂಜ್ಯ ಸ್ವಾಮೀಜಿಗಳಿಗೂ ಈ ಸಂಬಂಧ ಏಕಮತ್ಯದಿಂದ ಮತ್ತು ಒಕ್ಕೊರಲಿನಿಂದ ಸಮೀಕ್ಷೆಯಲ್ಲಿ ನೈಜವಾದ ಜಾತಿ ಹೆಸರು ಬರೆಸುವಂತೆ ಮಹಾಸಭಾ ಮನವಿ ಮಾಡಿದೆ ಎಂದು ತಿಳಿಸಿದರು.
ಮಹಾಸಭೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಶಂಕರ ಬಿದರಿಯವರು ಮಾತನಾಡಿ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿ-ಗತಿಯ ಆಧಾರದಲ್ಲಿ ಸಮುದಾಯದ ಹಿಂದುಳಿದಿರುವಿಕೆ ಗುರುತಿಸಿ ಅವರಿಗೆ ಸೌಲಭ್ಯ ಕಲ್ಪಿಸುತ್ತದೆ. ಈ ಹಿಂದಿನ ಸಮೀಕ್ಷೆಗಳಲ್ಲಿ ವೀರಶೈವ ಮತ್ತು ಲಿಂಗಾಯತರನ್ನು ಒಂದು ಜಾತಿ ಎಂದು ಪರಿಗಣಿಸಲಾಗಿದೆ. ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಅಧಿಕೃತವಾಗಿ ನೀಡಿಲ್ಲ. ಅದನ್ನು ಪರಿಗಣಿಸುವ ಅಗತ್ಯವಿದೆ. ನಮ್ಮ ಸಮಾಜದಲ್ಲಿ ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದವರಿದ್ದಾರೆ. ಹೀಗಾಗಿ ಪಾರದರ್ಶಕವಾಗಿ ವಿವಿಧ ವೃತ್ತಿಯನ್ನು ಮಾಡುವ ಬಡವ ಮತ್ತು ಕಡು ಬಡವರಿಗೆ ಪ್ರಾಮಾಣಿಕವಾಗಿ ಅಂಕ ನೀಡಿ, ಸೂಕ್ತ ಪ್ರವರ್ಗಕ್ಕೆ ಸೇರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಕಾರ್ಯದರ್ಶಿ ಹೆಚ್.ಎಂ.ರೇಣುಕ ಪ್ರಸನ್ನ, ಉಪಾಧ್ಯಕ್ಷರಾದ ಬಿ.ಎಸ್.ಸಚ್ಚಿದಾನಂದಮೂರ್ತಿ, ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಸೇರಿದಂತೆ ಮಹಾಸಭೆ ಮತ್ತು ಮಹಾಸಭೆಯ ಎಲ್ಲ ಹಂತದ ಘಟಕಗಳ/ವಿಭಾಗಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Leave feedback about this