ಬೆಂಗಳೂರು

ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ ಆಯ್ಕೆ ಹೈಕೋರ್ಟ್‌ ಅಸಿಂಧುಗೊಳಿಸಿ ಮತಗಳ ಮರು ಎಣಿಕೆಗೆ ಸೂಚನೆ

ಬೆಂಗಳೂರು:- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂಕು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್‌ ಅಸಿಂಧುಗೊಳಿಸಿದೆ. ಮಾತ್ರವಲ್ಲದೇ, ಮತಗಳ ಮರು ಎಣಿಕೆ ಮಾಡುವಂತೆ ಸೂಚನೆ ನೀಡಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ. ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ಕ್ರಮಕ್ಕೆ ಸೂಚಿಸಿ ನಾಲ್ಕು ವಾರದಲ್ಲಿ ಮರು ಮತ ಎಣಿಕೆ ನಡೆಸಲು ಆದೇಶಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥ ಗೌಡ ಅವರ ವಿರುದ್ಧ ಕೇವಲ 248 ಮತಗಳ ಅಂತರದಿಂದ ಗೆದ್ದಿದ್ದರು. ಹೀಗಾಗಿ ಮತ ಎಣಿಕೆ ವೇಳೆ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ ಗೌಡ ಆರೋಪಿಸಿದ್ದು, ನಂಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥ ಗೌಡ ಅರ್ಜಿ ಸಲ್ಲಿಸಿದ್ದರು.

ವಿಧಾನಸಭೆ ಚುನಾವಣೆ ಮತ ಎಣಿಕೆ ವೇಳೆ ಲೋಪವಾಗಿದೆ. ಹೀಗಾಗಿ ಶಾಸಕರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್‌, 4 ವಾರಗಳಲ್ಲಿ ಹೈಕೋರ್ಟ್ ಮರು ಮತ ಎಣಿಕೆ ನಡೆಸಲು ಆದೇಶ ನೀಡಿದೆ. ಈ ಮೂಲಕ ಕೆಎಂಎಪ್​ ಅಧ್ಯಕ್ಷರಾಗುವ ಕನಸು ಕಂಡಿದ್ದ ನಂಜೇಗೌಡರಿಗೆ ನಿರಾಸೆಯಾಗಿದೆ.

ಆಯ್ಕೆ ಅಸಿಂಧುಗೊಳಿಸಿ ಆದೇಶ ನೀಡುತ್ತಿದ್ದಂತೆಯೇ ಇದಕ್ಕೆ ತಡೆ ನೀಡುವಂತೆ ನಂಜೇಗೌಡರ ಪರ ವಕೀಲೆ ನಳಿನಾ ಮಾಯಗೌಡ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಹೈಕೋರ್ಟ್ ಪೀಠ, 30 ದಿನಗಳವರೆಗೆ ತನ್ನದೇ ತೀರ್ಪಿಗೆ ಹೈಕೋರ್ಟ್ ತಡೆ ನೀಡಿದ್ದು, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆಗೆ ಅವಕಾಶ ನೀಡಿದೆ. ಹೀಗಾಗಿ ಇದೀಗ ನಂಜೇಗೌಡ ಅವರು 1 ತಿಂಗಳು ಒಳಗೆ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್ ಆದೇಶಕ್ಕೆ ತಡೆ ಬರಬೇಕು. ಇಲ್ಲವಾದಲ್ಲಿ ಅವರು ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಮಾಧ್ಯಮಕ್ಕೆ ನಂಜೇಗೌಡ ಪ್ರತಿಕ್ರಿಯಿಸಿದ್ದು, ನ್ಯಾಯಾಲಯ ಮರು ಮತ ಎಣಿಕೆಗೆ ಆದೇಶ ಮಾಡಿದ್ರೆ ಸ್ವಾಗತ ಮಾಡುತ್ತೇನೆ. ಆದರೆ, ಅಸಿಂಧುಗೊಳಿಸಿ ಮರು ಮತ ಎಣಿಕೆಗೆ ಆದೇಶ ಮಾಡಿದೆ. 30 ದಿನದೊಳಗೆ ಮರು ಮತ ಎಣಿಕೆಯಾಗಿ ಫಲಿತಾಂಶಕ್ಕೆ ಸೂಚಿಸಿದೆ. ಅಲ್ಲದೇ ಮೇಲ್ಮನವಿ ಸಲ್ಲಿಕೆ ಮಾಡುವುದಕ್ಕೂ ಅವಕಾಶ ಸಿಕ್ಕಿದೆ. ಹಾಗಾಗಿ ನಾನು ಸುಪ್ರೀಂಕೋರ್ಟ್ ಮೊರೆ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video