ಚಿಕ್ಕಮಗಳೂರು:- ದೇವಾಲಯಗಳು ಮೂಡನಂಬಿಕೆಗಳ ಕೇಂದ್ರಗಳಲ್ಲ, ಬದಲಿಗೆ ಅವು ಮೂಲ ನಂಬಿಕೆಗಳ ಕೇಂದ್ರಗಳಾಗಿವೆ ಎಂದು ರಾಜ್ಯ ದೇವಾಲಯ ಸಂವರ್ಧನ ಸಮಿತಿಯ ಸಂಯೋಜಕರಾದ ಮನೋಹರ ಮಠದ್ ಹೇಳಿದ್ದಾರೆ.
ಅವರು ಶನಿವಾರದಂದು ಜಿಲ್ಲೆಯ ನರಸಿಂಹರಾಜಪುರ ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ಸಭಾಭವನದಲ್ಲಿ ಜಿಲ್ಲೆಯ ದೇವಾಲಯ ಸಂವರ್ಧನ ಸಮಿತಿ ಆಶ್ರಯದಲ್ಲಿ ತಾಲೂಕು ಮಟ್ಟದ ದೇವಾಲಯ ಆಡಳಿತ ಸಮಿತಿಯ ಸದಸ್ಯರ ಚಿಂತನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇವಸ್ಥಾನಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಾದ ಜಾತ್ರೆ, ಉತ್ಸವ, ಹೋಮ- ಹವನ, ಪೂಜಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು. ಅವು ವಿದ್ಯಾದಾನ ಮಾಡುವ ಕೇಂದ್ರಗಳಾಗಬೇಕು, ಆರೋಗ್ಯ ಕೇಂದ್ರಗಳಾಗಬೇಕು, ನ್ಯಾಯದಾನ ನೀಡುವ ಕೇಂದ್ರಗಳಾಗಬೇಕು, ಅನ್ನದಾನದ ಕೇಂದ್ರಗಳಾಗಬೇಕು, ಉದ್ಯೋಗ ನೀಡುವ ಕೇಂದ್ರಗಳಾಗಬೇಕು, ಮನುಷ್ಯನಿಗೆ ಸಾಮಾಜಿಕವಾಗಿ ರಕ್ಷಣೆ ನೀಡುವ ರಕ್ಷಣಾ
ಕೇಂದ್ರಗಳಾಗಬೇಕು, ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವ ಕೇಂದ್ರಗಳಾಗಬೇಕು, ದೇವಾಲಯಗಳು ಶೈಕ್ಷಣಿಕ ಕೇಂದ್ರಗಳಾಗಬೇಕು, ಸಾಮಾಜಿಕ ಕೇಂದ್ರಗಳಾಗಬೇಕು, ಸೇವಾ ಕೇಂದ್ರಗಳಾಗಬೇಕು, ತರಬೇತಿಯ ಶಿಬಿರಗಳನ್ನು ಹಮ್ಮಿಕೊಳ್ಳುವ ಕೇಂದ್ರಗಳಾಗಬೇಕು, ಈ ರೀತಿಯ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿ ದೇವಾಲಯಗಳು ಮೂಡಿ ಬರಬೇಕು ಎಂದರು. ಕೆಲವರು ಸಮಾಜ ಒಡೆಯುವ ಕೆಲಸ ಮಾಡುತ್ತಾರೆ. ಆದರೆ, ದೇವಸ್ಥಾನಗಳು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿವೆ, ನಮ್ಮ ಅಜ್ಞಾನದಿಂದಲೇ ಜಾತಿ ಮಾಡಿಕೊಂಡಿದ್ದೇವೆ, ದೇವರು ಎಲ್ಲರಿಗೂ ಸೇರಿದ್ದಾನೆ ಕೆಲವು ಸಾಹಿತಿಗಳು ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ನಮ್ಮ ನಂಬಿಕೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ದೇವಸ್ಥಾನಗಳು ಇಲ್ಲದಿದ್ದರೆ ತಾಲೂಕಿಗೆ ಒಂದರಂತೆ ಹುಚ್ಛಾಸ್ಪತ್ರೆಗಳನ್ನ ತೆರೆಯಬೇಕಾಗುತ್ತದೆ ಎಂದು ವಿಜ್ಞಾನಿಗಳೆ ಹೇಳಿದ್ದಾರೆ ಎಂದರು.
ನಮ್ಮ ರಾಜ್ಯದಲ್ಲಿ ಅರ್ಚಕರು ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಅವರಿಗೆ ಆಡಳಿತ ಮಂಡಳಿಯವರು ನೆರವು ನೀಡಬೇಕು ಅರ್ಚಕರು ಸಮಿತಿಯವರು ಒಟ್ಟಾಗಿ ಸಮನ್ವಯತೆಯಿಂದ ಬಾಳಬೇಕು ದೇವರನ್ನು ನಂಬಿದವರನ್ನು ಸಂತೋಷಪಡಿಸಬೇಕು, ರಾಜ್ಯದಲ್ಲಿ 2,50,000 ಅರ್ಚಕರಲ್ಲಿ 50,000 ಅರ್ಚಕರು ಮಾತ್ರ ವೇದ ಅಧ್ಯಯನ ಮಾಡಿದ್ದಾರೆ ದೇವಸ್ಥಾನವನ್ನು ನೆಮ್ಮದಿ ಕೇಂದ್ರವನ್ನಾಗಿ ಮಾಡೋಣ ಪ್ರತಿ ದೇವಸ್ಥಾನದಲ್ಲಿ ಸಂಸ್ಕಾರ ಶಿಕ್ಷಣ ನೀಡುವ ಮೂಲಕ ಸಂಸ್ಕಾರದ ಕೇಂದ್ರವಾಗಬೇಕು, ರಾಜ್ಯದಲ್ಲಿ 2,50,000 ದೇವಸ್ಥಾನಗಳು ರಾಜ್ಯದಲ್ಲಿವೆ, 34,560 ಮುಜರಾಯಿ ದೇವಸ್ಥಾನಗಳಿವೆ, ಎಲ್ಲಾ ದೇವಸ್ಥಾನಗಳು ಸುಸಜ್ಜಿತವಾಗಿರಬೇಕು ಎಲ್ಲ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಬೇಕು ಪೂಜಾ ಪದ್ಧತಿ ಬದಲಾವಣೆ ಆಗಬಾರದು ಇದರಲ್ಲಿ ರಾಜಕೀಯ ಹಸ್ತಕ್ಷೇಪವಿರಬಾರದು ಎಲ್ಲರೂ ಸಹಮತದೊಂದಿಗೆ ದೇವಾಲಯದ ಅಭಿವೃದ್ಧಿಗೆ ಕೈಜೋಡಿಸಿ ನಡೆಯುವಂತಾಗಬೇಕು ಎಂದರು.
ದೇವಾಲಯ ಸಂವರ್ಧನ ಸಮಿತಿ ಸಂಯೋಜಕರಾಗಿ ನೇರಳೆ ಪ್ರಕಾಶ್ ಭಟ್, ಸಹ ಸಂಯೋಜಕರಾಗಿ ಜಗದೀಶ್ ಭಟ್, ಪ್ರತೀಕ್, ಸದಸ್ಯರಾಗಿ ಮುತ್ತಿನಕೊಪ್ಪ ಹರೀಶ್, ಶೆಟ್ಟಿಕೊಪ್ಪ ಎಂ ಮಹೇಶ್, ಹೊನ್ನೇಕೊಡಿಗೆಯ ಹಂಚಿನ ಮನೆ ನಾಗರಾಜ್, ಶೆಟ್ಟಿಕೊಪ್ಪದ ವಾಣಿ ನರೇಂದ್ರ, ವರ್ಕಟ್ಟೆಯ ಸಂಪತ್ ಕುಮಾರ್, ನೇರಳೆ ರಾಘವೇಂದ್ರ ಭಟ್, ಕುಣಿಹಡಲು ರಾಘವೇಂದ್ರ ಅವರುಗಳನ್ನು ಸಮಿತಿಯ ಸದಸ್ಯರನ್ನಾಗಿ ಘೋಷಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಆಗಮಿಸಿದ್ದ ತಾಲೂಕಿನ ವಿವಿಧ ದೇವಾಲಯಗಳ ಆಡಳಿತ ಮಂಡಳಿಯ ಸದಸ್ಯರೊಂದಿಗೆ ದೇವಾಲಗಳ ಅಭಿವೃದ್ಧಿಯ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು. ಕೆಲವರು ಉತ್ತಮವಾದ ವಿಚಾರಗಳನ್ನ ಪ್ರಸ್ತಾಪನೆ ಮಾಡಿದರು ಬಹುತೇಕ ಸದಸ್ಯರು ದೇವಾಲಯಗಳ ದಾಖಲೆಗಳ ಬಗ್ಗೆ ಚರ್ಚೆಯನ್ನು ನಡೆಸಿದರು.
ಪ್ರಾರಂಭದಲ್ಲಿ ಶೆಟ್ಟಿಕೊಪ್ಪದ ಮಹೇಶ್ ಹಾಗೂ ಡಿ.ಜಿ ಸತೀಶ್ ರವರ ನೇತೃತ್ವದಲ್ಲಿ ಅಂಟಿಕೆ ಪಿಂಟಿಗೆ ಕಲಾತಂಡದವರಿಂದ ಚಿಂತನಾ ಸಭೆಯ ಉದ್ಘಾಟನೆಯ ಜ್ಯೋತಿಯನ್ನ ಪ್ರಜ್ವಲಿಸಲಾಯಿತು, ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅಂಟಿಕೆ ಪಿಂಟಿಗೆ ಜ್ಯೋತಿಯನ್ನು ಹಚ್ಚಿ ಜಾನಪದ ಸೊಗಡಿನ ಗ್ರಾಮೀಣ ಸೊಗಡಿನ ಹಾಡುಗಳ ಮೂಲಕ ಊರಿನ ಎಲ್ಲಾ ದೈವ ದೇವರುಗಳನ್ನ ನೆನೆದು ಜ್ಯೋತಿಯನ್ನ ವೇದಿಕೆಯಲ್ಲಿ ಪ್ರಜ್ವಲಿಸಲಾಯಿತು.
ಅಂಟಿಕೆ ಪಿಂಟಿಗೆ ತಂಡದಲ್ಲಿ ಬಾಲರಾಜ್, ಹೂವಣ್ಣ, ಜೇನುಕಟ್ಟೆಸರ ವೆಂಕಟೇಶ್, ಎ ಡಿ ಉಮೇಶ್, ಧರಣೇಶ್, ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶೃಂಗೇರಿ ಕ್ಷೇತ್ರದ ದೇವಾಲಯ ಸಂವರ್ಧನ ಸಮಿತಿಯ ಸಂಯೋಜಕರಾದ ಕಾರ್ತಿಕೇಯ ಕೆ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೊದಲಿಗೆ ವಾಣಿ ನರೇಂದ್ರ ರವರು ಸ್ವಾಗತಿಸಿದರು, ನೇರಳೆ ರಾಘವೇಂದ್ರ ಭಟ್ ವಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಶೆಟ್ಟಿಕೊಪ್ಪ ಮಹೇಶ್ ನಡೆಸಿಕೊಟ್ಟರು.
ಇಂತಹ ಅದ್ಭುತವಾದ ಚಿಂತನ ಸಭೆ ನೆರವೇರಲು ಹಾಗೂ ಈ ಕಾರ್ಯಕ್ರಮವನ್ನು ಸಂಯೋಜಿಸಲು ಹಲವಾರು ದಿನಗಳ ಕಾಲ ಕಾರ್ತಿಕ ಭಟ್, ನಂದಕುಮಾರ್ ಭಟ್, ಪ್ರಕಾಶ್ ಭಟ್, ರಾಜೇಂದ್ರ ಕುಮಾರ್, ವಿಶ್ವನಾಥ್ ಇತರರು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕ್ರಮಗಳನ್ನ ಸಂಯೋಜಿಸಿದ್ದರು.
ಕಾರ್ಯಕ್ರಮದ ನಂತರದಲ್ಲಿ ಚಿಂತನ ಸಭೆಯ ಸಾಧಕ ಬಾದಕಗಳ ಬಗ್ಗೆ, ಯಶಸ್ವಿಯಾಗಿ ನಡೆದು ಬಂದ ಬಗ್ಗೆ, ಆತ್ಮಾವಲೋಕನ ಸಭೆಯನ್ನ ಮಾನ್ಯ ಮನೋಹರ್ ಮಠ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದು ಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರದಂದು ತಾಲೂಕು ಸಮಿತಿಯ ಸಭೆ ನಡೆಸಿ ದೇವಾಲಯಗಳ ಅಭಿವೃದ್ಧಿಯ ಬಗ್ಗೆ ವಿಷಯ ವಿನಿಮಯ ಮಾಡಿಕೊಂಡು, ನಿರಂತರವಾಗಿ ಸಮಿತಿ ಕಾರ್ಯೋನ್ಮುಖ ವಾಗುವಂತೆ ನೋಡಿಕೊಳ್ಳಬೇಕೆಂದು ಮಾನ್ಯರು ಸಲಹೆ ನೀಡಿದರು. ಈ ಸಭೆಯಲ್ಲಿ ಹಲವಾರು ಜನ ಅಭಿಪ್ರಾಯ ಅನಿಸಿಕೆಗಳನ್ನ ಹಂಚಿಕೊಂಡರು.
Leave feedback about this