ಬೆಂಗಳೂರು

ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿರುವವರ ವಿರುದ್ಧ ಲಿಂಗಾಯತ ಮಹಾಸಭಾದಿಂದ ಪೋಲೀಸರಿಗೆ ದೂರು

ಬೆಂಗಳೂರು:- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದ ಕಳೆದ ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಸದಾಶಿವ ನಗರದ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಹಾಸಭೆಯ ಹಿರಿಯ ಉಪಾಧ್ಯಕ್ಷರು ಹಾಗೂ ಮಹಾಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ, ಸಚಿವರು ಮಾತನಾಡಿ, ಸೆಪ್ಟಂಬರ್ 22ರಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025(ಜಾತಿಗಣತಿ)ಯಲ್ಲಿ ತಪ್ಪದೇ ಪ್ರತಿಯೊಬ್ಬರೂ ಭಾಗವಹಿಸಿ, ಅನುಸೂಚಿಯ ಧರ್ಮದ ಕಾಲಂನಲ್ಲಿ “ಇತರೇ” ಎಂದು ನೀಡಿರುವ ಕಾಲಂನಲ್ಲಿ “ವೀರಶೈವ ಲಿಂಗಾಯತ” ಎಂದು, ಹಾಗೇ ಜಾತಿಯ ಕಾಲಂನಲ್ಲಿ “ಲಿಂಗಾಯತ” ಅಥವಾ “ವೀರಶೈವ” ಎಂದು ಮತ್ತು ಉಪಜಾತಿ ಕಾಲಂನಲ್ಲಿ ತಾವು ಸೇರಿದ ತಮ್ಮಗಳ ಉಪಜಾತಿಯ ಸಂಕೇತ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಬರೆಸಬೇಕೆಂದು ಸಮಾಜಬಾಂಧವರಿಗೆ ಮನವಿ ಮಾಡಿರುತ್ತಾರೆ. ಈ ಸುದ್ದಿಯನ್ನು ಮಾಧ್ಯಮದವರು ಯಥಾವತ್ತಾಗಿ ಪ್ರಸಾರ ಮಾಡಿರುತ್ತಾರೆ. ಇದಕ್ಕಾಗಿ ನಾವು ಆಭಾರಿಗಳಾಗಿದ್ದೇವೆ.

ಆದರೆ, ಟಿ.ವಿ.ವಾಹಿನಿಯಲ್ಲಿ ಪ್ರಸಾರವಾಗಿರುವ ವಿಡಿಯೋವನ್ನು ಕೆಲವರು ದುರುದ್ದೇಶದಿಂದ ಎಡಿಟ್ ಮಾಡಿ, ಮಹಾಸಭೆಯ ಮನವಿಯನ್ನು ತಿರುಚುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದಲ್ಲಿ ಅನಾವಶ್ಯಕವಾಗಿ ಗೊಂದಲ ಮೂಡಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ವನ್ನು ಹಾಳುಮಾಡುತ್ತಿರುವ ಇಂಥಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೋಲೀಸರಿಗೆ ದೂರನ್ನು ನೀಡಲಾಗಿದೆ.

ಆದ್ದರಿಂದ ಸಮಾಜ ಬಾಂಧವರು ಇಂಥಹ ಕುಚೋದ್ಯಗಳಿಗೆ ಕಿವಿಗೊಡದೇ, ಪ್ರತಿಯೊಬ್ಬರೂ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ”ಯಲ್ಲಿ ಪಾಲ್ಗೊಂಡು, ಮಹಾಸಭೆಯ ಮನವಿಯಂತೆ ಬರೆಸಿ, ಸಮಾಜದ ನಿಖರ ಸಂಖ್ಯೆ ತಿಳಿಯಲು ಸಹಕರಿಸಬೇಕಾಗಿ ವಿನಂತಿಸುತ್ತೇವೆ ಎಂದು ಪತ್ರಿಕಾ ಹೇಳಿಕೆಯ ಪ್ರತಿಯನ್ನು ಕಾರ್ಯದರ್ಶಿ ಹೆಚ್.ಎಂ.ರೇಣುಕ ಪ್ರಸನ್ನ ಬಿಡುಗಡೆ ಮಾಡಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video