ಮಂಡ್ಯ:- ಗಣೇಶಮೂರ್ತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆಯು ಜಿಲ್ಲೆಯ ಮದ್ದೂರು ಪಟ್ಟಣವನ್ನೇ ಪ್ರಕ್ಷುಬ್ಧಗೊಳಿಸಿದೆ. ಭಾನುವಾರ ರಾತ್ರಿ ನಡೆದ ಘಟನೆಯು ಸೋಮವಾರ ತೀವ್ರ ಸ್ವರೂಪ ಪಡೆದು ಲಾಠಿ ಪ್ರಹಾರಕ್ಕೂ ಕಾರಣವಾಯಿತು. ಇದರೊಂದಿಗೆ ರಾಜಕೀಯ ಪಕ್ಷಗಳ ನಾಯಕರ ದಂಡೇ ಪಟ್ಟಣಕ್ಕೆ ಆಗಮಿಸಿದ್ದರಿಂದ ನಾನಾ ರೀತಿಯ ಬೆಳವಣಿಗೆಗಳೂ ನಡೆದವು.
ಮದ್ದೂರಿನ ರಾಮ್ರಹೀಂ ನಗರದಲ್ಲಿ ಭಾನುವಾರ ರಾತ್ರಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಹಿನ್ನೆಲೆಯಲ್ಲಿ ರಾತ್ರಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಬಿಗಿ ಬಂದೋಬಸ್ತ್ನೊಂದಿಗೆ ಅಧಿಕಾರಿಗಳೊಂದಿಗೆ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ತಹಬದಿಗೆ ತರುವ ಪ್ರಯತ್ನ ಮಾಡಿದ್ದರು. ಆದರೆ, ಸೋಮವಾರ ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಅಂದು ಬೆಳಗ್ಗೆ ನಾನಾ ಸಂಘಟನೆಗಳು ಸೇರಿದಂತೆ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಸ್ಥಳೀಯ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನೂರಾರು ಮಂದಿಯಿಂದ ಉಗ್ರ ನರಸಿಂಹ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಇದರೊಂದಿಗೆ ಬೀದಿ ಬೀದಿಗಳಲ್ಲೂ ಮೆರವಣಿಗೆ ನಡೆಯಿತು. ಪೊಲೀಸ್ ಉನ್ನತಾಧಿಕಾರಿಗಳ ಮಧ್ಯೆ ಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಯಾಗಿ ಬೆಳಗ್ಗೆ 9.30ಕ್ಕೆ ಆರಂಭಗೊಂಡ ಮೆರವಣಿಗೆಯು ಮಂದಗತಿಯಲ್ಲಿ ಸಾಗುತ್ತಿತ್ತು.
ಶ್ರೀ ಉಗ್ರನರಸಿಂಹ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು, ಪೇಟೆ ಬೀದಿ ಮಾರ್ಗದಲ್ಲಿ ಸಾಗುತ್ತಾ ಕೆಮ್ಮಣ್ಣು ನಾಲೆ ಸರ್ಕಲ್ ಬಳಿಗೆ ಆಗಮಿಸಿದಾಗ ಅಲ್ಲಿದ್ದ ಪ್ರತಿಭಟನಾಕಾರರು ಉದ್ರಿಕ್ತರಾದರು. ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿ ಪರಿಸ್ಥಿತಿ ತಹಬದಿಗೆ ತಂದರು. ಸತತ ಐದು ತಾಸುಗಳ ಬಳಿಕ ಮಧ್ಯಾಹ್ನ 2ಕ್ಕೆ ನಡೆದ ಮೆರವಣಿಗೆಯು ತಾಲೂಕು ಕಚೇರಿ ಆವರಣದಲ್ಲಿ ಅಂತ್ಯಗೊಂಡಿತು. ಈ ಮಧ್ಯೆ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್ನಲ್ಲಿರಿಸಿಕೊಂಡು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಾ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗುತ್ತಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಸೋಮವಾರ ಮುಂಜಾನೆಯಿಂದ ಇಂದು ಮಧ್ಯಾಹ್ನದವರೆಗೆ ಜಾರಿಗೊಂಡಿದ್ದ ನಿಷೇಧಾಜ್ಞೆಗೂ ಯಾವುದೇ ಕಿಮ್ಮತ್ತು ಇಲ್ಲದಂತಾಗಿದೆ.
ಪೇಟೆ ಬೀದಿಯ ಮೂಲಕ ಪ್ರವಾಸಿ ಮಂದಿರ ಬಳಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತಕ್ಕೆ ಆಗಮಿಸಿದ ವೇಳೆ ಪ್ರತಿಭಟನಾಕಾರರು, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡುವ ಪ್ರಯತ್ನವೂ ನಡೆಯಿತು. ಆಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ಮನವೊಲಿಸಿದರು. ಬಳಿಕ ಹೆದ್ದಾರಿ ಬದಿಯ ಸರ್ವಿಸ್ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆಯನ್ನು ತಾಲೂಕು ಕಚೇರಿಗೆ ಹೋಗುವಂತೆ ಮಾಡಲಾಯಿತು. ಭಾನುವಾರ ರಾತ್ರಿ ಸಂಭವಿಸಿದ ಕಲ್ಲು ತೂರಾಟಕ್ಕೆ ಕಾರಣರೆನ್ನಲದ 21 ಮಂದಿ ಆರೋಪಿಗಳನ್ನು ಪೊಲೀಸರು ಭಾನುವಾರ ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆಗೆ ಒಳಗೊಳಪಡಿಸಿದ್ದಾರೆ.
ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಮದ್ದೂರು ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಹೋಟೆಲ್, ಅಂಗಡಿಗಳು, ಬೀದಿಬದಿ ವ್ಯಾಪಾರಸ್ಥರು, ಪ್ರಮುಖ ವಾಣಿಜ್ಯ ಕೇಂದ್ರಗಳು ಮತ್ತು ಸಾರಿಗೆ ಸಂಬಂಧ ಆಟೋ ರಿಕ್ಷಾಗಳು ಇನ್ನಿತರ ವಹಿವಾಟುಗಳು ಸ್ಥಗಿತಗೊಂಡಿದ್ದವು.
ಭಾನುವಾರ ರಾತ್ರಿಯಿಡೀ ಮದ್ದೂರು ಪಟ್ಟಣದಲ್ಲೇ ಬೀಡುಬಿಟ್ಟಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, 5ಕ್ಕೂ ಹೆಚ್ಚು ಡಿವೈಎಸ್ಪಿಗಳು ಮತ್ತು 10ಕ್ಕೂ ಹೆಚ್ಚು ವೃತ್ತ ನಿರೀಕ್ಷಕರು ಸೇರಿದಂತೆ ನೂರಾರು ಮಂದಿ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ಹಾಕಲಾಗಿದೆ.
ಕಲ್ಲು ತೂರಾಟ ಘಟನೆಯಿಂದಾಗಿ ಸೋಮವಾರ ಬೆಳಗ್ಗೆಯಿಂದಲೇ ಮದ್ದೂರು ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಹೋಟೆಲ್, ಅಂಗಡಿ-ಮುಂಗಟ್ಟುಗಳು, ಬೀದಿಬದಿ ವ್ಯಾಪಾರಸ್ಥರು, ಪ್ರಮುಖ ವಾಣಿಜ್ಯ ಕೇಂದ್ರಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾಗಿಲು ಮುಚ್ಚಿ ಬಂದ್ ಆಚರಿಸಿದರು. ಸಾರಿಗೆ ಸಂಬಂಧ ಆಟೋ ಸಂಚಾರ ಹಾಗೂ ಇನ್ನಿತರ ವಹಿವಾಟುಗಳು ಸ್ಥಗಿತಗೊಂಡಿದ್ದವು.
ಭಾನುವಾರ ರಾತ್ರಿಯ ಘಟನೆ ಖಂಡಿಸಿ ಕೆಲ ಸಂಘಟನೆಗಳ ಕಾರ್ಯಕರ್ತರು ಯಾವುದೇ ಕರೆ ಇಲ್ಲದೆ ಸ್ವಯಂ ಪ್ರೇರಿತರಾಗಿ ಸೋಮವಾರ ಮದ್ದೂರು ಪಟ್ಟಣದಲ್ಲಿ ಜಮಾಯಿಸಿದ್ದರು. ಮೆರವಣಿಗೆ ಆರಂಭಗೊಳ್ಳುತ್ತಿದ್ದರಿಂದ ಜನರ ಸಂಖ್ಯೆಯೂ ಇನ್ನಷ್ಟು ಹೆಚ್ಚಾಯಿತು. ನಾನಾ ರಸ್ತೆಗಳಿಂದ ಆಗಮಿಸುತ್ತಿದ್ದ ಜನರು ಗಣೇಶನ ಮೂರ್ತಿಯೊಂದಿಗೆ ನಡೆಯುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ಸೇರಿಸಿಕೊಂಡರು.
ಗಣೇಶ ಮೂರ್ತಿ ಮೆರವಣಿಗೆ ವೇಳೆ ಭಾನುವಾರ ರಾತ್ರಿ ನಡೆದ ಕಲ್ಲುತೂರಾಟ ಪ್ರಕರಣದ ಹಿನ್ನೆಲೆಯಲ್ಲಿಮದ್ದೂರು ಪಟ್ಟಣಕ್ಕೆ ಸೋಮವಾರ ರಾಜಕಾರಣಿಗಳ ದಂಡೇ ಆಗಮಿಸಿತ್ತು. ಬಿಜೆಪಿ ಮತ್ತು ಜೆಡಿಎಸ್ನ ರಾಜ್ಯ ಮಟ್ಟದ ನಾಯಕರು ಸಹ ಆಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಸಂಸದ ಪ್ರತಾಪ್ಸಿಂಹ, ಮಾಜಿ ಶಾಸಕ ಡಾ.ಅನ್ನದಾನಿ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಸೇರಿದಂತೆ ಹಲವು ರಾಜಕಾರಣಿಗಳು ಮದ್ದೂರು ಪಟ್ಟಣದಲ್ಲಿ ಜಮಾಯಿಸಿದ್ದರು.
ಮದ್ದೂರು ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ರಾಜಧಾನಿ ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆ ಸರಿಯಲ್ಲ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಚಿತಾವಣೆಯಿಂದ ಘರ್ಷಣೆ ನಡೆದಿದೆ ಎಂದು ಬಿಂಬಿಸಿ ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಗ್ರಹಿಸಿದರು.
ಯಾವುದೇ ವ್ಯಕ್ತಿಗಳಿಂದ ಧರ್ಮಕ್ಕೆ ಧಕ್ಕೆಯುಂಟಾದಲ್ಲಿ ಬೀದಿಗಿಳಿದು ಹೋರಾಡುವ ಛಲಕ್ಕೆ ಇಂದಿನ ಪ್ರತಿಭಟನೆಯೇ ಸಾಕ್ಷಿ. ಇಂತಹ ಕೃತ್ಯಗಳಿಗೆ ಪೋಲೀಸ್ ಅಧಿಕಾರಿಗಳು, ಜಿಲ್ಲಾಡಳಿತ ತಕ್ಕ ಉತ್ತರ ನೀಡಬೇಕು ಎಂದು ಮಂಡ್ಯದ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
Leave feedback about this