ಗದಗ

ಶಾಸಕ ಚಂದ್ರು ಲಮಾಣಿ ಆಡಿಯೋದಲ್ಲಿನ ಧ್ವನಿ ಪರಿಶೀಲನೆಗಾಗಿ ಎಫ್‌ಎಸ್‌ಎಲ್ ವರದಿ.!

ಗದಗ:- ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿದ ಮೇಲೆ ಈಗ ರಾಜ್ಯದ ಗಮನ ಸೆಳೆದಿದೆ. ಈ ಪ್ರಕರಣದಲ್ಲಿ ಶಾಸಕ ಹಾಗೂ ಗುತ್ತಿಗೆದಾರನ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆ ಆಡಿಯೋದಲ್ಲಿನ ಧ್ವನಿ ಪರಿಶೀಲನೆಗಾಗಿ ಎಫ್‌ಎಸ್‌ಎಲ್ ವರದಿ ಮಾತ್ರ ಬಾಕಿ ಇದೆ ಎಂದು ತಿಳಿದಿದೆ. ಈ ವರದಿ ಬಂದ ಬಳಿಕ ಪ್ರಕರಣದ ಮುಂದಿನ ಕ್ರಮ ಸ್ಪಷ್ಟವಾಗಲಿದೆ. ಜುಲೈ ತಿಂಗಳಲ್ಲಿ ಒಂದು ಕಾಮಗಾರಿಗೆ ಟೆಂಡರ್ ಮಂಜೂರಿಯಾಗಿತ್ತು, ನಂತರ ಒಂದೂವರೆ ತಿಂಗಳ ಹಿಂದೆ ಆ ಕಾಮಗಾರಿಗೆ ಶಾಸಕ ಚಂದ್ರು ಲಮಾಣಿ ಭೂಮಿ ಪೂಜೆ ನೆರವೇರಿಸಿದ್ದರು. ಪೂಜೆ ಮಾಡಿದ ಸಂಜೆ ಹಣ ನೀಡುವುದಾಗಿ ಗುತ್ತಿಗೆದಾರ ವಿಜಯರಾಜ್ ಮಾತು ಕೊಟ್ಟಿದ್ದಾನೆ ಎನ್ನಲಾಗಿದೆ. ಈ ಭರವಸೆಯ ಮೇರೆಗೆ ಕಾಮಗಾರಿಗೆ ಪೂಜೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಪೂಜೆ ಬಳಿಕ ಗುತ್ತಿಗೆದಾರ ವಿಜಯರಾಜ್ ಶಾಸಕರ ಫೋನ್‌ಗಳನ್ನು ಸ್ವೀಕರಿಸಿಲ್ಲ ಎಂದು ಹೇಳಲಾಗಿದೆ. ಶಾಸಕರ ಪಿಎಗಳು ಹಲವು ಬಾರಿ ಕರೆ ಮಾಡಿದರೂ ರಿಸೀವ್ ಮಾಡಲಿಲ್ಲ, ಹೀಗಾಗಿ ವಿಷಯ ಕೆಲ ದಿನಗಳ ಕಾಲ ಶಾಂತವಾಗಿತ್ತು. ನಂತರ ಒಂದೂವರೆ ತಿಂಗಳ ಬಳಿಕ ಗುತ್ತಿಗೆದಾರ ಶಾಸಕರನ್ನು ಭೇಟಿ ಮಾಡಲು ಹೋದಾಗ ಪರಿಸ್ಥಿತಿ ಬದಲಾಗಿದೆ ಎನ್ನಲಾಗಿದೆ.

ಆ ವೇಳೆ ಶಾಸಕ ಜೋರಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ಲೋಕಾಯುಕ್ತರ ವಶದಲ್ಲಿದೆ. “ಏಯ್ ಬ್ಲ್ಯಾಕ್ ಮಾಡಿ ಫ್ರೀಯಾಗಿ ಮಾಡ್ಕೋಬೇಕು ಅಂದ್ಕೊಂಡಿಯಾ” ಹಾಗೂ “ನಿನ್ನ ನಡಾ ಮುರಿಸ್ತೀನಿ” ಎಂಬ ಧ್ವನಿಗಳು ಆ ಆಡಿಯೋದಲ್ಲಿವೆ ಎಂದು ಹೇಳಲಾಗಿದೆ. “ಎಚ್ ಕೆ ಪಾಟೀಲ್ ಬಳಿ ನಡೆದಂತೆ ನನ್ನ ಬಳಿ ನಡೆಯಲ್ಲ” ಎಂಬ ಮಾತು ಕೂಡ ಆ ಸಂಭಾಷಣೆಯಲ್ಲಿ ಕೇಳಿ ಬಂದಿದೆ ಎಂದು ತಿಳಿದು ಬಂದಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video