ಚಿಕ್ಕಮಗಳೂರು:- ಬುಡಕಟ್ಟು ಜನಾಂಗದವರು ಪ್ರಕೃತಿಯ ಆರಾಧಕರು ಮಾತ್ರವಲ್ಲ, ನಿಜವಾದ ಪ್ರಕೃತಿಯ ರಕ್ಷಕರು ಎಂದು ಬುಡಕಟ್ಟು ಜನಾಂಗದ ಹಿರಿಯ ಮುಖಂಡ ಹಾಗೂ ಜಾನಪದ ಕಲಾವಿದ ಶೆಟ್ಟಿಕೊಪ್ಪ ಮಹೇಶ್ ಹೇಳಿದ್ದಾರೆ.
ಅವರು ಕಳೆದ ಭಾನುವಾರದಂದು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು ಬಿ.ಹೆಚ್ ಕೈಮರದ ತಾಲೂಕು ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ರಮೇಶ್ ರವರ ಮನೆಯಂಗಳದಲ್ಲಿ ನಡೆದ ವಿಶ್ವ ಜಾನಪದ ಹಾಗೂ ವಿಶ್ವ ಬುಡಕಟ್ಟು ಜನಾಂಗದ ದಿನಾಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅವರು ಮಾತನಾಡಿ 1994ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ (ಯುಎನ್ಓ) ವಿಶ್ವ ಬುಡಕಟ್ಟು ಜನಾಂಗಗಳ ಅಂತರಾಷ್ಟ್ರೀಯ ದಿನಾಚರಣೆಯನ್ನು ಆಗಸ್ಟ್ 9ರಂದು ಘೋಷಿಸಿತ್ತು. ಆ ಪ್ರಯುಕ್ತ ದೇಶದ ಎಲ್ಲೆಡೆಯಲ್ಲಿಯೂ ಕೂಡ ವಿಶ್ವ ಬುಡಕಟ್ಟು ದಿನಾಚರಣೆ ಜೊತೆಯಲ್ಲಿ ವಿಶ್ವ ಜಾನಪದ ದಿನಾಚರಣೆಯನ್ನು ದೇಶದ ಎಲ್ಲೆಡೆಯಲ್ಲಿಯೂ ಆಚರಿಸಿಕೊಂಡು ಬರಲಾಗುತ್ತಿದೆ, ಬುಡಕಟ್ಟು ಜನರ ಹಕ್ಕುಗಳು ಅವರ ಸಂಸ್ಕೃತಿ ಪರಂಪರೆ ಜೀವನ ಶೈಲಿ ಹಾಗೂ ಪ್ರಕೃತಿಯೊಂದಿಗೆ ಒಡನಾಟ ಹೊಂದಾಣಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಬುಡಕಟ್ಟು ಜನಾಂಗ ಪ್ರಕೃತಿಯೊಂದಿಗೆ ಬದುಕುವ ಶ್ರೇಷ್ಠ ಜನಾಂಗವಾಗಿದೆ.
ಅರಣ್ಯ, ನೆಲ, ಜಲ, ಪಾಣಿ ಪಕ್ಷಿಗಳೊಂದಿಗೆ ಸಹಜವಾಗಿ ಜೀವನ ನಡೆಸುವ ಕೌಶಲ್ಯವನ್ನು ಈ ಜನಾಂಗ ಹೊಂದಿದೆ. ಬುಡಕಟ್ಟು ಜನರು ಇಂದಿಗೂ ಕೂಡ ಶಿಕ್ಷಣದ ಕೊರತೆಯಿಂದ ಆರ್ಥಿಕ ಹಿಂದುಳಿತದಿಂದ ಆರೋಗ್ಯ ಸೇವೆಯ ಕೊರತೆಯಿಂದ ಆಧುನಿಕ ಸಮಾಜದಲ್ಲಿ ಅಲ್ಪ ಸ್ಥಾನ ಹೊಂದಿ ಬದುಕುತ್ತಿದ್ದಾರೆ, ಇವರ ಅಸ್ತಿತ್ವ ಮತ್ತು ಹಕ್ಕುಗಳನ್ನು ಸಂರಕ್ಷಿಸಿ ಸಮಾನ ಅವಕಾಶ ಕಲ್ಪಿಸುವುದು ಮತ್ತು ಅವರ ಸಂಸ್ಕೃತಿ ಪರಂಪರೆ ಉಳಿಸುವುದು ಎಲ್ಲಾ ವರ್ಗದವರ ಜವಾಬ್ದಾರಿಯಾಗಿದೆ.
ಜಾನಪದ ಹುಟ್ಟಿದ್ದೇ ಬುಡಕಟ್ಟು ಜನಾಂಗದಿಂದ ಎಂದರೆ ತಪ್ಪಾಗಲಾರದು. ಜನರ ಬಾಯಿಂದ ಬಾಯಿಗೆ ಹರಿದಾಡಿರುವ ಪದಗಳೇ ಜಾನಪದವಾಗಿ ಸೃಷ್ಟಿಸಿದೆ. ಬುಡಕಟ್ಟು ಜನಾಂಗಕ್ಕೂ ಜಾನಪದಕ್ಕೂ ಅವಿನಾಭಾವ ಸಂಬಂಧವಿದೆ ಆದುದರಿಂದಲೇ ಇಂದು ವಿಶ್ವ ಜಾನಪದ ಹಾಗೂ ವಿಶ್ವ ಬುಡಕಟ್ಟು ಜನಾಂಗದವರ ದಿನಾಚರಣೆಯನ್ನು ಏಕಕಾಲದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.
Leave feedback about this