ಬೆಂಗಳೂರು:- ಭ್ರಷ್ಟಾಚಾರ ಮಾಡುವುದರಲ್ಲಿ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ತಮ್ಮ ತಮ್ಮ ಅಧಿಕಾರವಧಿಯಲ್ಲಿ ಸಾಬೀತು ಪಡಿಸಿದ್ದಾರೆ. ಯಾವ ಸರ್ಕಾರ ಆಡಳಿತದಲ್ಲಿರುತ್ತದೋ ಆ ಸರ್ಕಾರ ವಿಪಕ್ಷಗಳ ವಿರುದ್ಧ ಹಠ ಸಾಧಿಸುವುದು ಸಾಮಾನ್ಯ. ಕಾಂಗ್ರೆಸ್ ಸರ್ಕಾರ ಬಿಜೆಪಿಯ ಭ್ರಷ್ಟಾಚಾರ ಬಯಲಿಗೆಳೆಯಲು ಆಯೋಗ ರಚಿಸಿ, ವರದಿ ಸ್ವೀಕರಿಸಿ ತಪರಾಕಿ ನೀಡಿದೆ.
ಯೆಸ್… 2019ರಿಂದ 2022ರವರೆಗೆ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳಲ್ಲಿ ನಡೆದ ಹಗರಣಗಳ ಬಗ್ಗೆ ಸಾರ್ವಜನಿಕ ವಲಯದಿಂದ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಆ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರಚಿಸಿ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವುದಕ್ಕೆ ಸೂಚನೆ ನೀಡಿತ್ತು. ಈಗ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಸರ್ಕಾರಕ್ಕೆ ವರದಿ ಒಪ್ಪಿಸಿದೆ.
ಕಳೆದ ಒಂದು ವರ್ಷದಿಂದ ಬಿಜೆಪಿ ಅವಧಿಯಲ್ಲಿ ನಡೆದ ಹಗರಣದ ಮಾಹಿತಿಯನ್ನು ನಾಗಮೋಹನ್ ದಾಸ್ ಆಯೋಗ ಕಲೆ ಹಾಕಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಕಳೆದ ವಾರವಷ್ಟೇ ರಾಜ್ಯ ಕಾಂಗ್ರೆಸ್ ಸರ್ಕಾರ ಆಯೋಗದ ವರದಿಯನ್ನು ಸಲ್ಲಿಕೆ ಮಾಡಿದೆ. ವರದಿಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ.
2019-2022ರ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅನೇಕ ಲೋಪ ದೋಷಗಳನ್ನು ನಾಗಮೋಹನ್ ದಾಸ್ ವರದಿ ಎತ್ತಿ ತೋರಿಸಿದೆ. ಬಿಬಿಎಂಪಿಯ ಹಲವು ಕಾಮಗಾರಿ ಯೋಜನೆಗಳಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ ಎಂದು ಹೇಳಿದೆ. 2019 ರಿಂದ 2022ರ ನಡುವೆ 3,049.35 ಕೋಟಿ ರೂ.ಗಳ ಹಗರಣ ನಡೆದಿರುವ ಬಗ್ಗೆ ಬಹಿರಂಗಗೊಳಿಸಿದೆ.
ನಾಗಮೋಹನ್ ದಾಸ್ ಆಯೋಗ ಪರಿಶೀಲಿಸಿದ 761 ಕಾಮಗಾರಿಗಳಲ್ಲೂ ಲೋಪ ದೋಷಗಳನ್ನು ದಾಖಲೆ ಸಮೇತ ಪತ್ತೆ ಹಚ್ಚಿದೆ. ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ ಮಳೆನೀರು ಚರಂಡಿಗಳು, ಯೋಜನೆ ಮಂಜೂರಾತಿ ಮತ್ತು ವಾಸ್ತವ್ಯ ಪ್ರಮಾಣಪತ್ರಗಳು, ಸರೋವರ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ಅಕ್ರಮಗಳು ನಡೆದಿರುವುದರ ಬಗ್ಗೆ ವರದಿ ಹೊರಗೆಳೆದಿದೆ.
ಆಡಳಿತಾತ್ಮಕ ಅನುಮೋದನೆಗಳಿಲ್ಲದೆ ಕೈಗೊಂಡ ಕಾಮಗಾರಿಗಳ ಸಂಖ್ಯೆ ದೊಡ್ದದೇ ಇದೆ. ಅನಧಿಕೃತ ವ್ಯಕ್ತಿಗಳಿಗೆ ಸಂಭಾವನೆ ಪಾವತಿಗಳು, ಹೆಚ್ಚುವರಿ ಪಾವತಿಗಳು ಬಹುತೇಕ ಎಲ್ಲಾ ಕಾಮಗಾರಿಗಳಲ್ಲಿ ಕಾಣಸಿಕ್ಕಿದೆ ಎಂದು ವರದಿ ಹೇಳಿದೆ. ಅಷ್ಟಲ್ಲದೇ, ಗುಣಮಟ್ಟ ನಿಯಂತ್ರಣದ ಕೊರತೆ ಸೇರಿದಂತೆ ಅನೇಕ ಅಕ್ರಮಗಳು ನಡೆದಿರುವುದರ ಬಗ್ಗೆಯೂ ಉಲ್ಲೇಖಿಸಿದ್ದು, ಬಿಜೆಪಿಯ ಭ್ರಷ್ಟಾಚಾರ ಆರೋಪಕ್ಕೆ ಕಾಂಗ್ರೆಸ್ ಗೆ ಪ್ರತಿ ಅಸ್ತ್ರ ಸಿಕ್ಕಂತಾಗಿದೆ.
ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಒಳ ಸಂಚು ಮತ್ತು ಒಳ ಒಪ್ಪಂದ ಆಗಿರುವ ಬಗ್ಗೆಯೂ ವರದಿ ಉಲ್ಲೇಖಿಸಿದ್ದು, ಪಾಲಿಕೆಯ ಕಾಮಗಾರಿಗಳ ಅಕ್ರಮದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಗಮೋಹನ್ ದಾಸ್ ವರದಿ ಶಿಫಾರಸು ಮಾಡಿದೆ.
ಒಟ್ಟಿನಲ್ಲಿ, ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪಕ್ಕೆ ಈ ವರದಿ ಮತ್ತಷ್ಟು ಬಲ ನೀಡಿದೆ. ಮಾತ್ರವಲ್ಲದೇ, “40% ಕಮಿಷನ್” ಆರೋಪಕ್ಕೆ ಕಾಂಗ್ರೆಸ್ ಸರ್ಕಾರ ಆಯೋಗ ರಚಿಸಿ, ತನಿಖೆ ನಡೆಸಿ ವರದಿ ಸ್ವೀಕರಿಸಿಕೊಳ್ಳುವುದರ ಮೂಲಕ ಹೊಸ ಆಯಾಮವನ್ನೇ ನೀಡಿದ್ದು, ವರದಿಯ ಶಿಫಾರಸ್ಸುಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಹೇಗೆ ಕ್ರಮ ವಹಿಸುತ್ತದೆ ಅಥವಾ ರಾಜಕೀಯವಾಗಿ ಈ ವರದಿಯನ್ನು ಹೇಗೆ ತಂತ್ರವಾಗಿ ಬಳಸಿಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.
Leave feedback about this