ಚಿಕ್ಕಮಗಳೂರು:- ಜಾತಿ ಧರ್ಮಗಳ ಹೊಂದಾಣಿಕೆ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ ಎಂದು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಶೆಟ್ಟಿಕೊಪ್ಪ ಸಮೀಪದ ಭದ್ರ ಕಾಲೋನಿಯ ಮೊಹಿದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಹನೀಫ್ ಸಾ ಆದಿ ಹೇಳಿದ್ದಾರೆ.
ಅವರು ಬುಧವಾರದಂದು ಶೆಟ್ಟಿಕೊಪ್ಪ ಸಮೀಪದ ಭದ್ರ ಕಾಲೋನಿಯ ಮೋಹಿದೀನ್ ಜುಮ್ಮಾ ಮಸೀದಿಯ ವತಿಯಿಂದ ನಡೆದ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1500ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಈದ್ ಮಿಲಾದ್ ಆಚರಣೆಯ ಮೆರವಣಿಗೆಯಲ್ಲಿ ಭಾಗವಹಿಸಿ, ಶೆಟ್ಟಿಕೊಪ್ಪದ ರಾಜಬೀದಿಯ ಮೆರವಣಿಗೆಯಲ್ಲಿ ಪ್ರವಾದಿಯವರ ಸಂದೇಶ ನೀಡಿ ಮಾತನಾಡಿದರು.
ಅವರು ಮಾತನಾಡಿ, ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಸಂದೇಶಗಳು ಕೇವಲ ಮುಸ್ಲಿಂ ಜನಾಂಗಕ್ಕೆ ಮಾತ್ರವಲ್ಲ, ಇಡೀ ಮನುಕುಲದ ಏಳಿಗೆಗಾಗಿ ನೀಡಿದ ಸಂದೇಶಗಳಾಗಿವೆ. ಅವರ ಸಂದೇಶಗಳು ವಿಶ್ವಕ್ಕೆ ಮಾದರಿಯಾಗಿವೆ. ಅವರು ಶಾಂತಿ ಪ್ರಿಯರು. ಸಮಾಜದಲ್ಲಿ ಜಾತಿ ಧರ್ಮಗಳ ಮಧ್ಯೆ ಪರಸ್ಪರ ನಂಬಿಕೆ ಹೊಂದಾಣಿಕೆ ಇಲ್ಲದಿದ್ದರೆ ಅಂತಹ ಸಮಾಜದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಹೇಳಿದರು. ಪ್ರವಾದಿಗಳು ತೋರಿಸಿದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಆಗ ಬದುಕಿನಲ್ಲಿ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದರು.
ಮತ್ತೋರ್ವ ಧರ್ಮ ಗುರು ಪರ್ವೀಜ್ ನಯಿಮಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶಗಳು ಅನುಭವದ ಸಂದೇಶಗಳಾಗಿವೆ. ತಮ್ಮ ಬದುಕಿನಲ್ಲಿ ದೊರೆತ ಅನುಭವದ ಬುತ್ತಿಗಳೇ ಅವರ ದಿವ್ಯ ಸಂದೇಶಗಳಾಗಿವೆ ನುಡಿದಂತೆ ನಡೆದ ವ್ಯಕ್ತಿ ಅವರಾಗಿದ್ದಾರೆ. ಪ್ರವಾದಿ ಮಹಮ್ಮದ್ ಪೈಗಂಬರ್ ರವರು ದೈವಾಂಶ ಸಂಭೂತರು. ದೀನರ, ಬಡವರ, ಬಗ್ಗೆ ಕಾರುಣ್ಯ ಉಳ್ಳವರಾಗಿದ್ದಾರೆ, ಆದುದರಿಂದ ಅವರನ್ನು ಕಾರುಣ್ಯದ ಕಡಲು ಎಂದು ಕರೆದಿದ್ದಾರೆ. ಅವರ ಸಂದೇಶಗಳು ಒಂದು ವರ್ಗಕ್ಕೆ ಸೀಮಿತವಲ್ಲ, ಮನುಕುಲದ ಉನ್ನತಿಗೆ ಸಂಬಂಧಿತವಾಗಿವೆ. ಶರಣರು, ಸಂತರು ಪ್ರವಾದಿಗಳು ಮನುಕುಲದ ಆಸ್ತಿ ಇದ್ದಂತೆ ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ವಿಶ್ವ ಮಾನವರಾಗಬಲ್ಲರು ಎಂದರು.
ಇದೇ ಸಂದರ್ಭದಲ್ಲಿ ಶೆಟ್ಟಿಕೊಪ್ಪ ಸಮೀಪದ ಭದ್ರ ಕಾಲೋನಿಯ ಮೋಹಿದೀನ್ ಜುಮ್ಮಾ ಮಸೀದಿಯಿಂದ ಮುಸಲ್ಮಾನ ಬಾಂಧವರು ಅಲಂಕಾರಗೊಂಡ ವಾಹನಗಳೊಂದಿಗೆ ಹಾಗೂ ಮದರಸದ ಮಕ್ಕಳ ದಫ್ ನೃತ್ಯದೊಂದಿಗೆ ಮೆರವಣಿಗೆ ಹೊರಟು ದೊಡ್ಡಿಹಟ್ಟಿ, ಶೆಟ್ಟಿಕೊಪ್ಪ, ನವಗ್ರಾಮದವರೆಗೂ ರಾಜ ಬೀದಿಯಲ್ಲಿ ಮೆರವಣಿಗೆ ಸಾಗಿ ಮಧ್ಯದ ಸರ್ಕಲ್ಗಳಲ್ಲಿ ಪೈಗಂಬರ್ ರವರ ಸಂದೇಶ ಸಾರುವ ಹಾಡುಗಳನ್ನು ಹಾಗೂ ಈದ್ ಮಿಲಾದ್ ಶುಭಾಶಯಗಳನ್ನು ಗ್ರಾಮದ ಎಲ್ಲಾ ಬಾಂಧವರಿಗೂ ಕೋರಿದರು. ಮುಸಲ್ಮಾನ ಬಾಂಧವರು ಶ್ರದ್ಧಾಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶೆಟ್ಟಿಕೊಪ್ಪದ ಎಲ್ಲ ಜನರಿಗೂ ಮಸೀದಿ ವತಿಯಿಂದ ಸಿಹಿ ವಿತರಿಸಲಾಯಿತು.
ನವಗ್ರಾಮದಲ್ಲಿ ಕ್ರಿಶ್ಚಿಯನ್ ಮುಖಂಡರು ಹಾಗೂ ಹಿಂದೂ ಮುಖಂಡರು ಮೆರವಣಿಗೆಯಲ್ಲಿ ಸಾಗಿ ಬಂದ ಮುಸಲ್ಮಾನ್ ಬಾಂಧವರಿಗೆ ನವಗ್ರಾಮದಲ್ಲಿ ಸಿಹಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಹಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಸುಲೇಮಾನ್ (ಮೋಣು), ಕಾರ್ಯದರ್ಶಿ ಸಿರಾಜ್, ಸಮಿತಿಯ ಸದಸ್ಯರುಗಳಾದ ಸುಲೇಮಾನ್, ಅಬ್ದುಲ್ ರೆಹಮಾನ್, ಎನ್.ಎ ಅಬೂಬಕರ್, ಇಬ್ರಾಹಿಂ, ಮಹಮ್ಮದ್, ಹಸನಬ್ಬ, ಹಮ್ಮಿದ್, ಖಾದರ್, ಸಾಧಿಕ್, ರಫೀಕ್ ಮುಂತಾದ ಕಿರಿಯ-ಹಿರಿಯ ಮುಖಂಡರು ಉಪಸ್ಥಿತರಿದ್ದರು.
Leave feedback about this