ಚಿಕ್ಕಮಗಳೂರು:- ಕಾನೂನಿನ ಸೂರಿನಡಿ ಮಹಿಳೆಯರಿಗೆ ರಕ್ಷಣೆ ಇದೆ, ಅಂತಹ ಕಾನೂನಿನ ಜ್ಞಾನವನ್ನು ಪ್ರತಿಯೋರ್ವ ಮಹಿಳೆಯು ತಿಳಿದುಕೊಳ್ಳಬೇಕು ಎಂದು ನರಸಿಂಹರಾಜಪುರದ ಹಿರಿಯ ವಕೀಲೆ ಸುಮಾ ಸುರೇಶ್ ಕುಮಾರ್ ಹೇಳಿದ್ದಾರೆ.
ಅವರು ಶುಕ್ರವಾರವಾದ ಇಂದು ಜಿಲ್ಲೆಯ ನ.ರಾ.ಪುರ ತಾಲೂಕಿನ ಶೆಟ್ಟಿಕೊಪ್ಪದ ಧ್ವಾಕ್ರ ಕಾರ್ಯಗಾರದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಹಿಳೆಯರಿಗೆ ಕಾನೂನಿನ ಅರಿವು ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಅವರು ಮಾತನಾಡಿ, ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸಬೇಕಾದದ್ದು ಪ್ರತಿಯೋರ್ವ ತಂದೆ ತಾಯಿಯ ಜವಾಬ್ದಾರಿಯಾಗಿದೆ. ಪೋಷಕರು ಜವಾಬ್ದಾರಿಯಿಂದ ಹಿಂದೆ ಸರಿದರೆ ಮಕ್ಕಳು ಸಮಾಜಕ್ಕೆ ಮಾರಕ ಶಕ್ತಿಗಳಾಗಬಹುದು. ಇತ್ತೀಚಿನ ದಿನಗಳಲ್ಲಿ ಕುಟುಂಬಗಳ ಸಂಬಂಧಗಳು ಒಡೆದು ಹೋಗಿವೆ ಪ್ರೀತಿ-ವಿಶ್ವಾಸಗಳು ಪರಸ್ಪರ ನಂಬಿಕೆಗಳು ಇಲ್ಲವಾಗಿದೆ. ಆ ಪರಿಣಾಮ ಮದುವೆಯಾದ ಮೂರು ಆರು ತಿಂಗಳೊಳಗೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ, ಸಂಸಾರದಲ್ಲಿ ಶಾಂತಿ, ನೆಮ್ಮದಿ, ತಾಳ್ಮೆ, ಸಮಾಧಾನವಿಲ್ಲವಾಗಿದೆ. ಇದರಿಂದ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿವೆ ಎಂದ ಅವರು, ಮದುವೆಯಾಗಿ 7ವರ್ಷದೊಳಗೆ ಮಹಿಳೆ ಸಂಶಯಾಸ್ಪದವಾಗಿ ಮರಣ ಹೊಂದಿದರೆ ಅಂತಹವರಿಗೆ ಕಾನೂನು ನೆರವು ನೀಡಲಿದೆ ಎಂದರು.
ಭ್ರೂಣ ಹತ್ಯೆ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪ್ರಬಲವಾಗಿ ಜಾರಿ ಇದ್ದರೂ ಕೂಡ ಅನೇಕ ಘಟನೆಗಳು ಕಣ್ ತಪ್ಪಿಸಿ ನಡೆಯುತ್ತಿವೆ. ಅದು ಮಹಾ ಅಪರಾಧವಾಗಲಿದೆ. ಇದರ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕಾಗಿದೆ. ಕಾನೂನನ್ನು ಮೀರಿ ಹೋಗುವ ಯಾವುದೇ ವ್ಯಕ್ತಿ ಆದರೂ ಕೂಡ ಅವನು ಅಪರಾಧಿಯಾಗುತ್ತಾನೆ, ಕಾನೂನು ಪಾಲನೆಯನ್ನ ಮಾಡುವುದರ ಮುಖಾಂತರದಲ್ಲಿ ಅವನ ಬದುಕಿನಲ್ಲಿ ಜೀವನದಲ್ಲಿ ಸಮಾಧಾನ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ ಬೇಬಿ ಹಾಗೂ ನರಸಿಂಹರಾಜಪುರದ ಹಿರಿಯ ವಕೀಲೆ ಸುಮಾ ಸುರೇಶ್ ಕುಮಾರ್ ರವರನ್ನು ಒಕ್ಕೂಟದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ವಿಂದ್ಯಾ ಹೆಗಡೆ ವಹಿಸಿದ್ದರು. ಅತಿಥಿಗಳಾಗಿ ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ,ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯರಾದ ವಾಣಿ ನರೇಂದ್ರ, ಶೈಲಾ ಮಹೇಶ್, ಚಂದ್ರಶೇಖರ್, ಎ.ಬಿ ಮಂಜುನಾಥ್, ಒಕ್ಕೂಟದ ವ್ಯವಸ್ಥಾಪಕ ಅಧಿಕಾರಿ ಸುಬ್ರಮಣ್ಯ, ವಲಯ ಮೇಲ್ವಿಚಾರಕ ಚೇತನ್, ಆಪ್ತ ಆರೋಗ್ಯ ಸಮಾಲೋಚಕಿ ಸುಜಾತ, ಒಕ್ಕೂಟದ ಪದಾಧಿಕಾರಿಗಳಾದ ಸುಮಿತ್ರ, ವಿನೋದ, ಶೈನಿ ಉಪಸ್ಥಿತರಿದ್ದರು. 2024 25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಒಕ್ಕೂಟ ಅಧ್ಯಕ್ಷರಾದ ವಿಂದ್ಯಾ ಹೆಗಡೆಯವರೊಂದಿಗೆ ವೇದಿಕೆಯ ಎಲ್ಲಾ ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Leave feedback about this