ಕಠ್ಮಂಡು:- ನೇಪಾಳದಲ್ಲಿ ಸಾಮಾಜಿಕ ಜಾಲತಾಣದ ಮೇಲಿನ ನಿಷೇಧವನ್ನು ಖಂಡಿಸಿ ಆರಂಭವಾದ ಪ್ರತಿಭಟನೆ ಇದೀಗ ಕ್ರೌರ್ಯದ ರೂಪ ತಳೆದಿದೆ. ಪ್ರತಿಭಟನೆಯ ಕಾವಿನಿಂದ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಓಲಿ ಈಗಾಗಲೇ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.
ನೇಪಾಳದ ಪಾರ್ಲಿಮೆಂಟ್, ಅಧ್ಯಕ್ಷರ ನಿವಾಸ, ಪ್ರಧಾನಿ ಬಂಗಲೆ, ವಿವಿಧ ರಾಜಕೀಯ ನಾಯಕರ ಮನೆಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಬೆಂಕಿ ಹಚ್ಚುತ್ತಿದ್ದಾರೆ. ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಗೂ ಇಂದು ಬೆಂಕಿ ಹಚ್ಚಲಾಗಿದ್ದು, ಈ ವೇಳೆ ಮನೆಯ ಒಳಗಿದ್ದ ಜಲನಾಥ್ ಖಾನಲ್ ಅವರ ಪತ್ನಿ ರಾಜಲಕ್ಷ್ಮಿ ಜೀವಂತವಾಗಿ ಸುಟ್ಟುಹೋಗಿದ್ದಾರೆ.
ಬೆಂಕಿಯಿಂದ ಸುಟ್ಟು ಹೋಗಿದ್ದ ರಾಜಲಕ್ಷ್ಮಿ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರಾದರೂ ಅಲ್ಲಿ ಅವರು ಸಾವನ್ನಪ್ಪಿದರು. ಈ ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೇಪಾಳದ ಜನರ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಾಗಿದೆ. ಪ್ರತಿಭಟನಾಕಾರರು ಭಯೋತ್ಪಾದಕರಂತೆ ವರ್ತಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
Leave feedback about this