ದಾವಣಗೆರೆ:- ಸದ್ಯದಲ್ಲೇ ನಡೆಯಲಿರುವ ಎರಡು ಕ್ಷೇತ್ರಗಳ (ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ) ಉಪ ಚುನಾವಣೆಗೆ ತೀವ್ರ ಲಾಬಿ ಆರಂಭಗೊಂಡಿದೆ. ಮಾಜಿ ಸಚಿವ ಎಚ್.ವೈ ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ, ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನನಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಇನ್ನೂ ಉಪ ಚುನಾವಣೆ ದಿನಾಂಕ ಘೋಷಣೆಯಾಗಿಲ್ಲವಾದರೂ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ತೀವ್ರ ಪೈಪೋಟಿ ಆರಂಭಗೊಂಡಿದೆ.
ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮ ವರ್ಚಸ್ಸಿನಿಂದ ಈ ಕ್ಷೇತ್ರದಲ್ಲಿ ಗೆದ್ದು ಬರುತ್ತಿದ್ದರು. ಅವರ ನಿಧನದಿಂದ ತೆರವಾಗಿರುವ ಸ್ಥಾನವಾದ್ದರಿಂದ ಅವರ ಕುಟುಂಬಕ್ಕೆ ಟಿಕೆಟ್ ಸಿಗಬೇಕು ಎಂಬುದು ಶಾಮನೂರು ಅವರ ಪುತ್ರರಾದ ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಾದ. ಈ ವಾದವನ್ನು ಆಧಾರವಾಗಿಟ್ಟುಕೊಂಡೇ ತಮ್ಮ ಪುತ್ರ ಹಾಗೂ ಶಾಮನೂರು ಅವರ ಮೊಮ್ಮಗನಾದ ಸಮರ್ಥ್ಗೆ ಟಿಕೆಟ್ ನೀಡುವಂತೆ ತೀವ್ರ ಲಾಬಿ ನಡೆಸಿದ್ದಾರೆ. ಆದರೆ, ಈ ಕ್ಷೇತ್ರ ಮುಸ್ಲಿಂ ಬಾಹುಳ್ಯವಿರುವ ಅಹಿಂದ ಮತದಾರರ ಕ್ಷೇತ್ರ. ಹೀಗಾಗಿ, ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ರಾಜ್ಯದ ಮುಸ್ಲಿಂ ನಾಯಕರು ಒಗ್ಗಟ್ಟಾಗಿ ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡಿದ್ದಾರೆ.
ಕ್ಷೇತ್ರದಲ್ಲಿ 85 ಸಾವಿರಕ್ಕೂ ಹೆಚ್ಚು ನಿರ್ಣಾಯಕ ಮತಗಳನ್ನು ಮುಸ್ಲಿಂ ಸಮುದಾಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಮುಖಂಡರು ಹಲವು ಸಭೆಗಳನ್ನು ನಡೆಸಿದ್ದಾರೆ. 1994ರಿಂದಲೂ ಸಮುದಾಯ ಶಾಮನೂರು ಕುಟುಂಬಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆ. ನನ್ನ ನಂತರ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಿ ಎಂದು ಬಹಿರಂಗವಾಗಿಯೇ ಶಾಮನೂರು ಶಿವಶಂಕರಪ್ಪ ಈ ಹಿಂದೆ ಹಲವು ಬಾರಿ ಹೇಳಿದ್ದರು. ಹಾಗಾಗಿ ಈ ಬಾರಿ ತಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ನಿರ್ಮಾಣ ಮಾಡಿದ್ದಾರೆ.
ಮುಸ್ಲಿಂ ಸಮುದಾಯದ ವಿಧಾನ ಪರಿಷತ್ ಹಾಲಿ ಸದಸ್ಯ ಅಬ್ದುಲ್ ಜಬ್ಬಾರ್, ಹಿರಿಯ ನಾಯಕ ಸೈಫುಲ್ಲಾ ಅವರ ಪುತ್ರರಾದ ಯುವ ನಾಯಕ ಖಾಲಿದ್ ಸೈಫುಲ್ಲಾ, ಪೈಲ್ವಾನ್ ಸೇರಿ ಹಲವು ಆಕಾಂಕ್ಷಿಗಳು ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಇನ್ನು ಕುರುಬ ಸಮುದಾಯದಿಂದ ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ವಿನಯ್ ಅವರು ಈ ಬಾರಿ ಕಾಂಗ್ರೆಸ್ನಿಂದ ಟಿಕೆಟಿಗಾಗಿ ಪೈಪೋಟಿ ನಡೆಸಿದ್ದಾರೆ.
ಈ ಬಾರಿ ಮುಸ್ಲಿಂ ನಾಯಕರ ಲಾಬಿ ತೀವ್ರಗೊಂಡ ಹಿನ್ನೆಲೆಯಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಆಗ್ರಹಕ್ಕೆ ಬಲ ಬರುವಂತೆ ಮಾಡಲು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ರಾಜೀನಾಮೆಯ ಬೆದರಿಕೆ ಒಡ್ಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಬಹಿರಂಗವಾಗಿ ಯಾರೂ ಖಚಿತಪಡಿಸುತ್ತಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಲ್ಲಿಕಾರ್ಜುನ್ ಹಾಗೂ ದಾವಣಗೆರೆ ಸಂಸದರಾಗಿರುವ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರ ಒತ್ತಡವನ್ನು ಕಾಂಗ್ರೆಸ್ ನಾಯಕತ್ವ ನಿರ್ಲಕ್ಷಿಸಲು ಆಗುತ್ತಿಲ್ಲ. ಆದರೆ, ಮುಸ್ಲಿಂ ಹಾಗೂ ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡು ಮತ್ತೆ ಲಿಂಗಾಯತರಿಗೆ ಟಿಕೆಟ್ ನೀಡಿದರೆ ಕ್ಷೇತ್ರ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಸಮೀಕ್ಷೆ ವರದಿಗಳ ಹಿನ್ನೆಲೆಯಲ್ಲಿ ಈ ಮೂರು ಸಮುದಾಯಗಳ ಒಟ್ಟಿಗೆ ಒಯ್ಯುವ ಸಾಮರ್ಥ್ಯವಿರುವವರಿಗೆ ಟಿಕೆಟ್ ನೀಡಬೇಕು ಎಂಬ ನಿಲುವು ಕಾಂಗ್ರೆಸ್ ನಾಯಕತ್ವದ್ದು.
ಈ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿ ಗೆಲ್ಲಬೇಕಾದರೆ ಆತ ಮುಸ್ಲಿಂ ಹಾಗೂ ಕುರುಬ ಸಮುದಾಯದ ಬೆಂಬಲ ಪಡೆಯಲೇಬೇಕು. ಅದೇ ರೀತಿ ಮುಸ್ಲಿಂ ಅಭ್ಯರ್ಥಿ ಗೆಲ್ಲಬೇಕಾದರೆ ಲಿಂಗಾಯತ ಸಮುದಾಯದ ಬೆಂಬಲ ಅತ್ಯಗತ್ಯ. ಹೀಗಾಗಿ ಕ್ಷೇತ್ರದ ಮೂರೂ ಸಮುದಾಯದ ನಾಯಕರು ಒಗ್ಗಟ್ಟಿನ ಹೆಸರು ಸೂಚಿಸಿ ಎಂದು ಸ್ಥಳೀಯ ನಾಯಕತ್ವಕ್ಕೆ ನಿರ್ದೇಶನ ನೀಡಲಾಗಿದೆ. ಆದರೆ, ಟಿಕೆಟ್ಗಾಗಿ ಸ್ಥಳೀಯ ನಾಯಕರೇ ತೀವ್ರ ಪೈಪೋಟಿ ನಡೆಸಿರುವುದರಿಂದ ಈ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ಗೆ ಬಿಸಿ ತುಪ್ಪವಾಗುವ ಸಾಧ್ಯತೆ ಕಂಡು ಬರುತ್ತಿದೆ. ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಖೈರುಗೊಳಿಸುವ ವಿಚಾರ ಕಾಂಗ್ರೆಸ್ ನಾಯಕತ್ವಕ್ಕೆ ಕಗ್ಗಂಟಾಗಿದೆ.
Leave feedback about this