ಬೆಂಗಳೂರು:- ಕಾಂಗ್ರೆಸ್ ಪಕ್ಷವನ್ನು ನಾನಾಗಲೀ ಡಿ.ಕೆ.ಶಿವಕುಮಾರ್ ಅವರಾಗಲಿ ಕಟ್ಟಿದ್ದಲ್ಲ. ಹಿರಿಯರು ನಮಗೆ ಬಿಟ್ಟು ಹೋಗಿರುವ ಪಕ್ಷ. ಇದನ್ನು ಹಾಳುಮಾಡದೇ ಮುಂದಿನ ಪೀಳಿಗೆಗೆ ಉಳಿಸಬೇಕಿರುವುದು ನಮ ಜವಾಬ್ದಾರಿ ಎಂದು ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೈದ್ಧಾಂತಿಕತೆಗೆ ಬದ್ಧನಾಗಿ ಕಾಂಗ್ರೆಸ್ನಲ್ಲಿದ್ದೇನೆ. ಅದರ ಹೊರತಾಗಿ ಬೇರೆ ಯಾವ ಕಾರಣಗಳಿಗೂ ಅಲ್ಲ. ಬಹಳಷ್ಟು ಜನರಿಗೆ ಕಾಂಗ್ರೆಸ್ನ ಆಳವಾದ ಇತಿಹಾಸ ಗೊತ್ತಿಲ್ಲ. 1969ರ ಬಳಿಕ ಈ ಪಕ್ಷದಿಂದ ಶಾಸಕನಾಗುವುದು, ಸಚಿವರಾಗುವುದು, ಸಂಸದರಾಗುವ ಆಲೋಚನೆಗಳಿದ್ದಷ್ಟೇ ಸೀಮಿತವಾಗಿದ್ದಾರೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಮಾತ್ರ ಉಳಿದಿರುವ ಪಕ್ಷವಲ್ಲ ಎಂದರು.
ದೇಶದ ಶೇ.60ರಷ್ಟು ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಪಕ್ಷದ ಸಿದ್ಧಾಂತ ಎಂಬ ವಿಚಾರ ಬಂದರೆ, ನಾನು ಯಾರೊಂದಿಗೂ ರಾಜೀ ಆಗುವುದಿಲ್ಲ. ಮುಲಾಜಿಲ್ಲದೆ ಸೈದ್ಧಾಂತಿಕ ವಿಚಾರಗಳನ್ನು ಮಾತನಾಡುತ್ತೇನೆ ಎಂದು ಹೇಳಿದರು.
ಕೆಲವೊಮ್ಮೆ ಅರಿವಿಲ್ಲದಂತೆ ಕೆಲವು ಬೆಳವಣಿಗೆಗಳಾಗುತ್ತವೆ. ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಇದು ಸಹಜ. ನಾನು ಯುವ ಕಾಂಗ್ರೆಸ್ನ ರಾಷ್ಟ್ರೀಯ ಪದಾಧಿಕಾರಿಯಾಗಿದ್ದಾಗ ಕೆ.ಎನ್.ರಾಜಣ್ಣ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿದ್ದರು. ಡಿ.ಕೆ.ಶಿವಕುಮಾರ್ ಜಿಲ್ಲಾಧ್ಯಕ್ಷರಾಗಿದ್ದರು. ಎಲ್ಲರ ನಿಲುವುಗಳು ಗೊತ್ತಿದೆ. ಎಲ್ಲರೂ ಕಾಂಗ್ರೆಸ್ಸಿಗರೇ. ಅವರು ಏನು ಹೇಳಿದ್ದರು, ಎಂಬುದನ್ನು ನಾನು ತಿಳಿಸಿದ್ದೇನೆ. ಅದಕ್ಕೆ ಡಿ.ಕೆ.ಶಿವಕುಮಾರ್ ಕೂಡ ಉತ್ತರ ನೀಡಿದ್ದಾರೆ. ಅಲ್ಲಿಗೆ ವಿಷಯ ಮುಗಿಯಿತು ಎಂದರು.
ಇನ್ನು ಬಾನು ಮುಷ್ತಾಕ್ರಿಂದ ದಸರಾ ಉದ್ಘಾಟಿಸುವುದನ್ನು ವಿರೋಧಿಸುತ್ತಿರುವುದು ಸರಿಯಲ್ಲ. ಇದು ಮಹಾರಾಜರ ಕಾರ್ಯಕ್ರಮ ಅಲ್ಲ, ಇದು ಸರ್ಕಾರದ ಕಾರ್ಯಕ್ರಮ. ರಾಜಮನೆತನದ ಒಳಗೆ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಬಾನು ಮುಷ್ತಾಕ್ ಭಾಗವಹಿಸುವುದಿಲ್ಲ. ದಸರಾ ಆಚರಣೆಯನ್ನು ವಿಶಾಲ ಮನೋಭಾವದಿಂದ ನೋಡಬೇಕಿದೆ ಎಂದರು.
ಮಹಾರಾಜರು 1918ರಲ್ಲೇ ಸಮಾಸಮಾಜದ ಕನಸು ಕಂಡವರು. ಆ ಪರಂಪರೆಯನ್ನು ನಾವು ಗೌರವಿಸಬೇಕಿದೆ. ಬಾನು ಮುಷ್ತಾಕ್ ದೇಶಕ್ಕೆ ಗೌರವ ತಂದುಕೊಟ್ಟ ಮಹಿಳೆ. ಅವರಿಗೆ ಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಸಿಕ್ಕಿದೆ. ಆರ್ಎಸ್ಎಸ್ನ ಯಾರಿಗೂ ಬೂಕರ್ ಪ್ರಶಸ್ತಿ ಸಿಕ್ಕಿಲ್ಲ. ಈ ಕಾರಣಕ್ಕೆ ಹೊಟ್ಟೆ ಉರಿಯಿಂದ ಬಾನು ಮುಷ್ತಕ್ರನ್ನು ವಿರೋಧಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Leave feedback about this